ಒಂಟಿ ಮಹಿಳೆಯ ಕೊಲೆ ಪ್ರಕರಣ: ಆರೋಪಿ ದಂಪತಿ ಪೊಲೀಸ್ ಕಸ್ಟಡಿಗೆ

Update: 2019-07-11 16:54 GMT

ಉಡುಪಿ, ಜು.11: ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಒಂಟಿ ಮಹಿಳೆ ರತ್ನಾವತಿ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ದಂಪತಿಯನ್ನು ಉಡುಪಿ ನ್ಯಾಯಾಲಯ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಜು. 9ರಂದು ಗೋವಾದಲ್ಲಿ ಬಂಧಿಸಲ್ಪಟ್ಟ ಆರೋಪಿಗಳಾದ ಧಾರವಾಡ ಜಿಲ್ಲೆಯ ನರಗುಂದ ನಿವಾಸಿ ಅಂಬರೀಶ್ (31) ಹಾಗೂ ಆತನ ಪತ್ನಿ ರಶೀದಾ ಯಾನೆ ಜ್ಯೋತಿ (26)ಯನ್ನು ಪೊಲೀಸರು ಜು.10ರಂದು ಸಂಜೆ ಉಡುಪಿಗೆ ಕರೆ ತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ನ್ಯಾಯಾಲಯ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿತು. ಅದರಂತೆ ಪ್ರಕರಣದ ತನಿಖಾ ಧಿಕಾರಿ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಇಂದು ಆರೋಪಿಗಳನ್ನು ಗೋವಾ ರಾಜ್ಯಕ್ಕೆ ಕರೆದುಕೊಂಡು ಹೋಗಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸೊತ್ತು ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ದಂಪತಿ ಚಿನ್ನಾಭರಣದ ಆಸೆಗಾಗಿ ಬಾಡಿಗೆ ಮನೆ ನೀಡಿದ ವೃದ್ಧೆಯನ್ನೇ ಕೊಲೆ ಮಾಡಿ ಪರಾರಿಯಾಗಿತ್ತು. ಈ ಪ್ರಕರಣ ಜು.6ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News