ಮಾದಕ ವಸ್ತುಗಳ ವಿರುದ್ಧ ಮುಂದುವರಿದ ಕಾರ್ಯಾಚರಣೆ: ನಾಲ್ಕು ಮಂದಿ ಸೆರೆ

Update: 2019-07-12 06:11 GMT
ಆಯುಕ್ತರಿಂದ ಪ್ರಶಂಸೆ

ಮಂಗಳೂರು, ಜು. 7: ಮಾದಕ ವಸ್ತುಗಳ ವಿರುದ್ಧ ಮಂಗಳೂರು ಪೊಲೀಸರು ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿಯನ್ನು ಬಂಧಿಸಿ 625 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.

ಕಾವೂರು ಪೊಲೀಸರು ಗುರುವಾರ ಮುಂಜಾನೆ 4:30ಕ್ಕೆ ಗಸ್ತು ಕಾರ್ಯಾಚರಣೆ ಸಂದರ್ಭದಲ್ಲಿ ಯೆಯ್ಯೆಡಿ- ದೇರೆಬೈಲ್ ರಸ್ತೆಯ ಹರಿಪದವು ಎಂಬಲ್ಲಿ ಗಾಂಜಾ ಹೊಂದಿದ್ದ ಪಚ್ಚನಾಡಿಯ ಗೌರವ್ ಕೋಟ್ಯಾನ್ (26) ಮತ್ತು ಕಾವೂರುಕಟ್ಟೆಯ ರಾಹುಲ್ ಡೊನಾಲ್ಡ್ ಮೊಂತೇರೊ (25) ಅವರನ್ನು ಬಂಧಿಸಿ 125 ಗ್ರಾಂ ಗಾಂಜಾ ವಶಪಡಿಸಿದ್ದಾರೆ.

ಗೌರವ್ ಕೋಟ್ಯಾನ್ ಹಳೆ ಆರೋಪಿಯಾಗಿದ್ದು, ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ರಾಹುಲ್ ಈ ಹಿಂದೆ ವಿದೇಶದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದ.

ಎಎಸ್ಸೈ ಮುರಳೀಧರ್ ಬಲ್ಲಾಳ್ ಮತ್ತು ಹೆಡ್‌ಕಾನ್ಸ್‌ಟೆಬಲ್ ಮೋಹನ್‌ಕುಮಾರ್ ರೌಂಡ್ಸ್ ನಲ್ಲಿದ್ದಾಗ ಹರಿಪದವಿನಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಿದ್ದು, ಅದರಲ್ಲಿ ಇಬ್ಬರು ವ್ಯಕ್ತಿಗಳಿದ್ದರು. ಅವರ ಬಳಿಗೆ ತೆರಳಿ ವಿಚಾರಿಸಿದಾಗ ತಾವು ಗೌರವ್ ಮತ್ತು ರಾಹುಲ್ ಎಂದು ಪರಿಚಯಿಸಿದ್ದರು. ತಪಾಸಣೆ ನಡೆಸಿದಾಗ ಅವರ ಬಳಿ ಗಾಂಜಾ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದರು.

ಇನ್ನೊಂದು ಪ್ರಕರಣದಲ್ಲಿ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ತಲಪಾಡಿ ಹಳೆ ಚೆಕ್ ಪೋಸ್ಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮಾಸ್ತಿಕಟ್ಟೆ ಉಳ್ಳಾಲ ನಿವಾಸಿ ಇಬ್ರಾಹೀಂ ಸುಫೈದ್(22) ಮತ್ತು ಹಳೆಕೋಟೆ ಉಳ್ಳಾಲ ನಿವಾಸಿ ಅಬ್ದುಲ್ ಅಫೀಲ್ (21) ಅವರನ್ನು ಬಂಧಿಸಿ 500 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಆಕ್ಟಿವಾ ಹೋಂಡಾ, ಮೊಬೈಲ್ ಪೋನ್‌ನ್ನು ವಶ ಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದರು.

ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಕನಾಮಿಕ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ರಾಮಕೃಷ್ಣ ಕೆ.ಕೆ. ಮತ್ತು ಸಿಬಂದಿ ಭಾಗವಹಿಸಿದ್ದರು.

ಆಯುಕ್ತರಿಂದ ಪ್ರಶಂಸೆ: ಮುಂಜಾನೆ ವೇಳೆ ಹರಿಪದವಿನಲ್ಲಿ ಕಾರ್ಯಾಚರಣೆ ನಡೆಸಿ ಗಾಂಜಾ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಕಾವೂರು ಪೊಲೀಸ್ ಠಾಣೆಯ ಎಎಸ್ಸೈ ಮುರಳೀಧರ್ ಬಲ್ಲಾಳ್ ಮತ್ತು ಹೆಡ್‌ಕಾನ್ಸ್‌ಟೆಬಲ್ ಮೋಹನ್‌ಕುಮಾರ್ ಅವರನ್ನು ಆಯುಕ್ತ ಸಂದೀಪ್ ಪಾಟೀಲ್ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News