ಆಯುರ್ವೇದದಲ್ಲಿ ಸಂಶೋಧನೆಯ ಕಲ್ಪನೆಯೇ ಸಂತಸದ ವಿಷಯ: ಡಾ. ಬಿ ಎಸ್ ಶ್ರೀಧರ

Update: 2019-07-11 17:14 GMT

ಮೂಡುಬಿದಿರೆ, ಜೂ 11: ‘ಆಯುರ್ವೇದದಲ್ಲಿ ಸಂಶೋಧನೆಯ ಕಲ್ಪನೆಯೇ ಒಂದು ಸಂತಸದ ವಿಷಯ. ಆಧುನಿಕ ವಿಜ್ಞಾನಕ್ಕೆ  ಹೋಲಿಸಿದಾಗ, ಆಯುರ್ವೇದದಲ್ಲಿನ ಸಂಶೋಧನೆ ಬಹಳ ಕಷ್ಟದ ಸಂಗತಿ. ಆದರೂ ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಗಳು ಏರ್ಪಟ್ಟು ಮನುಕುಲಕ್ಕೆ ಅನುಕೂಲವಾಗುವಂತಾಗಬೇಕು ಎಂದು  ಕರ್ನಾಟಕ ಸರ್ಕಾರದ ಆಯುಷ್ ವೈದ್ಯಕೀಯ ವಿಜ್ಞಾನದ ಸಹ ನಿರ್ದೇಶಕರಾದ ಡಾ. ಬಿ ಎಸ್ ಶ್ರೀಧರ ತಿಳಿಸಿದರು.

ಅವರು ಗುರುವಾರ ವಿದ್ಯಾಗಿರಿಯ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ವತಿಯಿಂದ ನಡೆದ ‘ಅಡ್ವಾನ್ಸ್ ಇನ್ ರಿಸರ್ಚ ಆ್ಯಂಡ್ ಡೆವಲಪ್ಮೆಂಟ್-2019’ ಒಂದು ದಿನದ ವಿಚಾರ ಸಂಕಿರಣ ಹಾಗೂ ‘ಆತ್ಮ’ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕೇರಳ ರಾಜ್ಯವು ಆಯುರ್ವೇದದ ಔಷಧಕ್ಕೆ  ದೇಶದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಅದಕ್ಕೆ  ಕಾರಣ ಇಲ್ಲಿನ ಜನರಲ್ಲಿ ಆಯುರ್ವೇದದ ಬಗೆಗಿನ ಜಾಗೃತಿ ಹಾಗೂ ಏಕರೀತಿಯ ಚಿಕಿತ್ಸಾ ವ್ಯವಸ್ಥೆ. ಆದರೆ ಬೇರೆ ರಾಜ್ಯಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ವಿಭಿನ್ನವಾದ್ದರಿಂದ ಅಷ್ಟೊಂದು ಸಾಫಲ್ಯತೆಯನ್ನು ಪಡೆದಿಲ್ಲ ಎಂದರು.

ಪ್ರಪಂಚದ ಪ್ರತಿಷ್ಟಿತ  ನೊಬೆಲ್ ಪ್ರಶಸ್ತಿಯು ಕಳೆದ 2016, 2017 ಹಾಗೂ 2018ರ ಸಾಲಿನಲ್ಲಿ ವೈದ್ಯಕೀಯ ಶಾಸ್ತ್ರಕ್ಕೆ ನೀಡಿದ ಪ್ರಶಸ್ತಿಯು ಆಯುರ್ವೇದ ಶಾಸ್ತ್ರವನ್ನು ಅವಲಂಬಿಸಿರುವುದು ಉಲ್ಲೇಖನೀಯ ಎಂದರು.

ಕೇಂದ್ರ ಸರ್ಕಾರ, ಆಯುಷ್ ಸಚಿವಾಲಯ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಆಯುರ್ವೇದದ ಬಗೆಗಿನ ಸಂಶೋಧನಗೆ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದರೂ, ಸಂಶೋಧನೆ ನಡೆಸುವವರ ಸಂಖ್ಯೆ ವಿರಳವಾಗಿದ್ದು, ಅದರಲ್ಲೂ ಸಲ್ಲಿಸಿದ ಅರ್ಜಿಗಳ ಗುಣಮಟ್ಟವು ಕಳಪೆಯಾಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ,  ಮೆಲುಕೋಟೆಯ ಅಕಾಡೆಮಿ ಆಫ್ ಸಂಸ್ಕøತ ರಿಸರ್ಚನ ಮಾಜಿ ನಿರ್ದೇಶಕ ಎಮ್.ಎ. ಲಕ್ಷ್ಮಿ ಆಚಾರ್ ಮಾತನಾಡಿ, ಸಾಹಿತ್ಯಿಕ ಸಂಶೋಧನೆ ಆಯುರ್ವೇದ ವಿಷಯದಲ್ಲಿ ಬಹಳ ವಿರಳವಿದ್ದು, ಈ ಕ್ಷೇತ್ರದಲ್ಲಿ ಸಂಶೋಧನೆಗೆ ವಿಫುಲ ಅವಕಾಶವಿದೆ. ಆಯುರ್ವೇದದ ವಿಷಯಕ್ಕೆ ಸಂಬಂದಪಟ್ಟಂತೆ 30 ಮಿಲಿಯನ್‍ಗೂ ಅಧಿಕ ಹಸ್ತಪ್ರತಿಗಳಿದ್ದು, ಇದರಲ್ಲಿ ಶೇಕಡಾ 10 ರಷ್ಟೂ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರು. ಇತ್ತೀಚಿನ ದಿನಗಳಲ್ಲಿ ನಾವು ಆಯುರ್ವೇದ ಡಾಕ್ಟರ್ ಅನ್ನು ನೋಡಬಹುದೆ ಹೊರತು ಆಯುರ್ವೇದ ವಿದ್ವಾಂಸರನ್ನಲ್ಲ. ಆ ಹಿನ್ನಲೆಯಲ್ಲಿ ಡಾ. ಮೋಹನ್ ಆಳ್ವ ಭಾರತೀಯ ಆಯುರ್ವೇದ ಶಾಸ್ತ್ರವನ್ನು ಬಲಪಡಿಸುವ  ಭಾರತೀಯ ವಿಜ್ಞಾನ ವಿಕಾಸ ಪರಿಷತ್ ಎಂಬ  ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಮನಸ್ಸು ಮಾಡಬೇಕು. ಆ ಮೂಲಕ ಭಾರತೀಯ, ಪರಿಸರ ಸ್ನೇಹಿ, ಕಡಿಮೆ ಖರ್ಚಿನ, ಸರಳತೆಯ, ಸುಸ್ಥಿರ ವಿಜ್ಞಾನ ತಂತ್ರಜ್ಞಾನದ ಸಂಶೋಧನೆಗಳಾಗಬೇಕು ಎಂದರು.

ಕಾರ್ಯಕ್ರಮದಲ್ಲಿ  ಅಮೆರಿಕಾದ ಮಿಸೌರಿ ವೈದ್ಯಕೀಯ ವಿಶ್ವವಿದ್ಯಾಲಯದ ಇನ್ಸಿಟಿಟ್ಯೂಟ್ ಆಫ್ ಗ್ರೀನ್ ನ್ಯಾನೋ ಟೆಕ್ನಾಲಜಿ ವಿಭಾಗದ ನಿರ್ದೇಶಕ ಡಾ ಕಟ್ಟೇಶ್ ವಿ ಕಟ್ಟಿ,  ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ  ಡಾ. ಜಿ. ಶ್ರೀನಿವಾಸ ಆಚಾರ್ಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ ಝೆನಿಕಾ ಡಿಸೋಜಾ, ಕಾರ್ಯಕ್ರಮದ ಸಂಯೋಜಕ ಡಾ ಸುಬ್ರಮಣ್ಯ ಪದ್ಯಾಣ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ.  ಗೀತಾ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News