ಸೆಮಿಫೈನಲ್ ಸೋತರೂ ಫೈನಲ್ ವರೆಗೆ ಇಂಗ್ಲೆಂಡ್ ನಲ್ಲೇ ಉಳಿಯಲಿರುವ ಟೀಂ ಇಂಡಿಯಾ: ಕಾರಣವೇನು ಗೊತ್ತಾ?

Update: 2019-07-12 09:22 GMT

ಲಂಡನ್, ಜು.12: ಐಸಿಸಿ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ನಲ್ಲಿ ನ್ಯೂಝಿಲ್ಯಾಂಡ್ ತಂಡದೆದುರು ಸೋತು ಭಾರತ ಪಂದ್ಯಾವಳಿಯಿಂದ ಹೊರಬಿದ್ದಿದ್ದರೂ ಟೀಂ ಇಂಡಿಯಾ ಜುಲೈ 14ರಂದು ನಡೆಯುವ ಫೈನಲ್ ಪಂದ್ಯದ ತನಕ ಇಂಗ್ಲೆಂಡ್ ನಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದೆ ಎಂದು ವರದಿಯಾಗಿದೆ.

ಭಾರತೀಯ ಕ್ರಿಕೆಟ್ ತಂಡ ತಾನು ಉಳಿದುಕೊಂಡಿದ್ದ ಮ್ಯಾಂಚೆಸ್ಟರ್ ಹೋಟೆಲ್ ಕೊಠಡಿಗಳನ್ನು ಗುರುವಾರವೇ ತೆರವುಗೊಳಿಸಿದ್ದರೂ ತಂಡದ ಸದಸ್ಯರಿಗೆ ಭಾರತಕ್ಕೆ ಹಿಂದಿರುಗಲು ಟಿಕೆಟ್ ಗಳ ಏರ್ಪಾಟು ಮಾಡಲು ಬಿಸಿಸಿಐಗೆ ಸಾಧ್ಯವಾಗದೇ ಇರುವುದರಿಂದ ತಂಡ ಮ್ಯಾಂಚೆಸ್ಟರ್ ನಲ್ಲಿಯೇ ರವಿವಾರ ತನಕ ಉಳಿದುಕೊಳ್ಳುವ ನಿರೀಕ್ಷೆಯಿದೆ.

ಭಾರತ ತಂಡದ ಸೆಮಿಫೈನಲ್ ಸೋಲು ಅನಿರೀಕ್ಷಿತವಾಗಿದ್ದರಿಂದ ಇದೀಗ ಭಾರತೀಯ ತಂಡದ ಎಲ್ಲಾ ಕ್ರಿಕೆಟಿಗರು ಅವರ ಕೋಚ್ ಮತ್ತಿತರ ಸಹಾಯಕ ಸಿಬ್ಬಂದಿ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.

ಬಿಸಿಸಿಐ ಕ್ರಿಕೆಟಿಗರಿಗೆ ಟಿಕೆಟ್ ಏರ್ಪಾಟು ಮಾಡಲು ಬಹಳಷ್ಟು ಶ್ರಮಪಟ್ಟರೂ ಜುಲೈ 14ರಂದು ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯದ ನಂತರವಷ್ಟೇ ಟಿಕೆಟ್ ಲಭ್ಯವಾಗಬಹುದು ಎಂದು ಹೇಳಲಾಗಿದೆ.

ಕೆಲ ಆಟಗಾರರು ಇಂಗ್ಲೆಂಡ್ ನಿಂದ ನೇರವಾಗಿ ತಾಯ್ನಾಡಿಗೆ ಮರಳಲಿದ್ದರೆ ಇನ್ನು ಕೆಲವರು  ಸ್ವಲ್ಪ ವಿಶ್ರಾಂತಿಗಾಗಿ ಬೇರೆಡೆ ಪ್ರಯಾಣಿಸಲಿದ್ದಾರೆಂಬ ಮಾಹಿತಿಯಿದೆ. ಟಿಕೆಟ್ ಲಭ್ಯತೆಯ ಅನುಸಾರ ಕ್ರಿಕೆಟಿಗರು ವಾಪಸಾಗಲಿದ್ದಾರೆ. ಎಂ ಎಸ್ ಧೋನಿ ಕೂಡ ತಮ್ಮ ಹುಟ್ಟೂರು ರಾಂಚಿಗೆ ಕೆಲ ದಿನಗಳ ನಂತರ ವಾಪಸಾಗುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News