ಹೆಚ್ಚುತ್ತಿರುವ ಅತ್ಯಾಚಾರ: ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹ

Update: 2019-07-12 11:06 GMT

ಮಂಗಳೂರು, ಜು.12: ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದ ರೀತಿಯಲ್ಲ ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ವೇದಿಕೆಯ ಮರ್ಲಿನ್ ಮಾರ್ಟಿಸ್, ಪುತ್ತೂರಿನ ಕಾಲೇಜು ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಪ್ರಸ್ತಾಪಿಸುತ್ತಾ, ಅತ್ಯಾಚಾರಕ್ಕೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಿರುವ ಸೂಚನೆ ಸಿಕ್ಷಿದಾಕ್ಷಣ ಅಂತರ್‌ಜಾಲದ ವ್ಯವಸ್ಥೆಯನ್ನು ನಿಯಂತ್ರಿಸಿ ಅದು ಹರಿದಾಡದಂತೆ ಕ್ರವು ಕೈಗೊಳ್ಳಬೇಕು ಎಂದರು.

ಪುತ್ತೂರಿನ ಶಾಲಾ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ವೈದ್ಯಕೀಯ ಪರಿಶೀಲನೆಗೆ ವಿಳಂಬವಾಗಿರು ವುದನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳ ಕುರಿತು ಅಧಿಕಾರಿಗಳು, ಸಿಬ್ಬಂದಿ ಸಂವೇದನಾಶೀಲರಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಸರಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಲೈಂಗಿಕ ಕಿರುಕುಳದ ಬಗ್ಗೆ ಎಚ್ಚರಿಕೆ ನೀಡುವ ಜಾಹೀರಾತು ಫಲಕವನ್ನು ಕಡ್ಡಾಯವಾಗಿ ಹಾಕಬೇಕು. ಬಸ್ಸುಗಳ ಸಿಬ್ಬಂದಿಗೆ ಇಂತಹ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಜವಾಬ್ದಾರಿ ವಹಿಸಲು ಪ್ರೇರೇಪಿಸಬೇಕು. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ ಕಾನೂನಿನ ಅಡಿಯಲ್ಲಿ ಸ್ಥಳೀಯ ದೂರು ನಿರ್ವಹಣಾ ಸಮಿತಿ ಜಿಲ್ಲಾಧಿಕಾರಿ ಕಚೇರಿಯಡಿ ಕಾರ್ಯನಿರ್ವಹಿಸುತ್ತದೆ. ಸಮಿತಿಯು ಹೆಣ್ಣು ಮಕ್ಕಳ ಮೇಲಾಗುವ ಲೈಂಗಿಕ ದೂರುಗಳ ಇತ್ಯರ್ಥ ಹಾಗೂ ತಡೆಯ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಮಿತಿಯನ್ನು ಸಶಕ್ತಗೊಳಿಸಿ ಪ್ರಚಾರ ಒದಗಿಸಬೇಕು. ಹೈಸ್ಕೂಲ್/ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಜೀವನ ಕೌಶಲ ಶಿಕ್ಷಣವನ್ನು ಕಡ್ಡಾಯವಾಗಿಸುವ ಜತೆಗೆ ಹರಿಹರೆಯದ ಆಕರ್ಷಣೆಗಳು, ಅಪಾಯಗಳನ್ನು ಗುರುತಿಸಿ ನಿಭಾಯಿಸುವ ಬಗ್ಗೆ ಗಮನ ಹರಿಸಬೇಕು ಎಂದು ಈಗಾಗಲೇ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಮಾಡಲಾದ ಶಿಫಾರಸ್ಸುಳ ಬಗ್ಗೆ ಅವರು ವಿವರ ನೀಡಿದರು.

ಗೋಷ್ಠಿಯಲ್ಲಿ ಮಂಜುಳಾ, ಟೆರ್ರಿ ಪಾಯಸ್, ವಿದ್ಯಾ ದಿನಕರ್, ಗ್ರೆಟ್ಟಾ, ಗುಲಾಬಿ ಬಿಳಿಮಲೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News