151 ವಾಹನ ಚಾಲಕರ ಲೈಸನ್ಸ್ ಅಮಾನತಿಗೆ ಕ್ರಮ: ಎಸ್ಪಿ ನಿಶಾ ಜೇಮ್ಸ್

Update: 2019-07-12 14:00 GMT

ಉಡುಪಿ, ಜು.12: ಉಡುಪಿ ಜಿಲ್ಲೆಯಾದ್ಯಂತ ನಿಯಮ ಉಲ್ಲಂಘಿಸಿ ಮಕ್ಕಳನ್ನು ಕರೆದೊಯ್ಯುವ 51 ಶಾಲಾ ವಾಹನ ಮತ್ತು ಮಾನವರನ್ನು ಸಾಗಿಸುವ 100 ಗೂಡ್ಸ್ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದ್ದು, ಇವುಗಳ ಚಾಲಕರ ಲೈಸನ್ಸ್‌ನ್ನು ಮೂರು ತಿಂಗಳ ಅವಧಿಗೆ ಅಮಾನತು ಗೊಳಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ(ಆರ್‌ಟಿಓ)ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ನಡೆದ ನೇರ ಫೋನ್ ಇನ್ ಕಾರ್ಯ ಕ್ರಮದಲ್ಲಿ ಅವರು ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದರು. ಸುಪ್ರೀಂ ಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ಅತಿವೇಗ, ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ, ಮೊಬೈಲ್ ಬಳಕೆ, ಗೂಡ್ಸ್ ವಾಹನದಲ್ಲಿ ಮಾನವ ಸಾಗಾಟ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಚಾಲಕನ ಪರವಾನಿಗೆ ಯನ್ನು ವಶಪಡಿಸಿಕೊಂಡು ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲು ಆರ್‌ಟಿಓಗೆ ಪತ್ರ ಬರೆಯಲಾಗುವುದು ಎಂದರು.

ಕಳೆದ ಎರಡು ವಾರಗಳಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 151 ಚಾಲಕರ ಪರವಾನಿಗೆ ಅಮಾನತಿಗೆ ಕ್ರಮಕೈಗೊಳ್ಳಲಾಗಿದೆ. ವಾಹನಗಳ ಸಾಮರ್ಥ್ಯಕ್ಕಿಂತ 12ವರ್ಷದೊಳಗಿನ ಎರಡು ಪಟ್ಟು ಮಕ್ಕಳನ್ನು ಸಾಗಿಸಬಹು ದಾಗಿದೆ. ಮೂವರು ಪ್ರಯಾಣಿಕರ ಕರೆದೊಯ್ಯುವ ರಿಕ್ಷಾದಲ್ಲಿ 12ವರ್ಷ ದೊಳಗಿನ ಆರು ಮಕ್ಕಳನ್ನು ಸಾಗಿಸಲು ಕಾನೂನಿನಲ್ಲಿ ಅವಕಾಶ ಇದೆ. ಅದಕ್ಕಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ವಿರುದ್ಧ ಕ್ರಮ ಜರಗಿಸಲಾಗುತ್ತದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 30 ಚೆಕ್‌ಪೋಸ್ಟ್: ಅಪರಾಧ ಪ್ರಕರಣ ಹಾಗೂ ಅಕ್ರಮ ಸಾಗಾಟಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ರಾತ್ರಿ ವೇಳೆ 30 ಹಾಗೂ ಹಗಲು ಹೊತ್ತು 10 ಚೆಕ್‌ಪೋಸ್ಟ್‌ಗಳು ಕಾರ್ಯಾಚರಿಸುತ್ತಿವೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.

ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಚುರುಕಿನಿಂದ ಕರ್ತವ್ಯ ನಿರ್ವಹಿಸುತ್ತಿ ದ್ದಾರೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅತ್ಯಂತ ಚುರುಕಿನಿಂದ ಕರ್ತವ್ಯ ನಿರ್ವಹಿಸುವಂತೆ ಎಲ್ಲ ಸಿಬ್ಬಂದಿಳಿಗೆ ಸೂಚನೆ ನೀಡಲಾಗಿದೆ ಎಂದರು.

ಮಳೆಗಾಲದಲ್ಲಿ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ಕಳ್ಳರನ್ನು ಪತ್ತೆ ಹಚ್ಚಲು ಈ ಚೆಕ್‌ಪೋಸ್ಟ್‌ಗಳು ಅನು ಕೂಲವಾಗುತ್ತಿವೆ. ಅಗತ್ಯ ಇರುವ ಕಡೆ ಈ ಚೆಕ್‌ಪೋಸ್ಟ್‌ಗಳನ್ನು ಶಾಶ್ವತವಾಗಿ ಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಮುಂದಿನ ವಾರದಿಂದ ವಿರುದ್ಧ ದಿಕ್ಕಿನಲ್ಲಿ ಸಂಚಾರ, ನೋ ಪಾರ್ಕಿಂಗ್ ಗಳಲ್ಲಿ ನಿಲುಗಡೆ, ಬುಲೆಟ್‌ಗಳಲ್ಲಿ ಕರ್ಕಶ ಶಬ್ದ ಮಾಡುವ ಸೈಲೆಸ್ಸರ್ ಹಾಗೂ ಇನ್ಸೂರೆನ್ಸ್ ಇಲ್ಲದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

ಅಕ್ರಮ ದನ ಸಾಗಾಟದ ವಿರುದ್ಧ ಕಟ್ಟೆಚ್ಚರ

ಉಡುಪಿ ಜಿಲ್ಲೆಯಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಅಕ್ರಮ ಜಾನು ವಾರು ಸಾಗಾಟಕ್ಕೆ ಸಂಬಂಧಿಸಿ ಒಟ್ಟು 146 ಮಂದಿಯನ್ನು ಬಂಧಿಸಲಾ ಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

2017ರಲ್ಲಿ ಪೊಲೀಸರು ಸ್ವಯಂ ಪ್ರೇರಿತ 26 ಪ್ರಕರಣಗಳನ್ನು ದಾಖಲಿಸಿ 68 ಮಂದಿಯನ್ನು ಬಂಧಿಸಿ, 41 ಜಾನುವಾರುಗಳ ರಕ್ಷಣೆ ಮಾಡಲಾ ಗಿದೆ. 2018ರಲ್ಲಿ 31 ಪ್ರಕರಣಗಳಲ್ಲಿ 47 ಬಂಧನ ಮತ್ತು 73 ಜಾನುವಾರುಗಳನ್ನು ರಕ್ಷಿಸಲಾಗಿದೆ. 2019ರಲ್ಲಿ ಈವರೆಗೆ 14 ಪ್ರಕರಣಗಳನ್ನು ದಾಖಲಿಸಿ 31 ಮಂದಿಯನ್ನು ಬಂಧಿಸಿ, 57 ಜಾನುವಾರುಗಳನ್ನು ರಕ್ಷಿಸಲಾಗಿದೆ.

ಅದೇ ರೀತಿ 2017ರಲ್ಲಿ ಏಳು ಪ್ರಕರಣಗಳಲ್ಲಿ 14 ಜಾನುವಾರುಗಳು ಕಳವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ. 2018ರಲ್ಲಿ 11 ಪ್ರಕರಣ, 20 ಜಾನುವಾರು ಕಳವು ಮತ್ತು 2019ರಲ್ಲಿ ಐದು ಪ್ರಕರಣಗಳಲ್ಲಿ 11 ಜಾನು ವಾರು ಕಳವಾಗಿವೆ. ಜಾನುವಾರು ಕಳವು ಮತ್ತು ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಪ್ರಕರಣದ ಆರೋಪಿಗಳ ಪೆರೇಡ್ ನಡೆಸಿ ಮುಚ್ಚಳಿಕೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಸಾಗಾಟ ತಡೆಯಲು ಜಿಲ್ಲೆಯ ಮೂರು ಪೊಲೀಸ್ ವಿಭಾಗಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಪಂಚಾಯತ್‌ಗಳ ಜೊತೆ ಸೇರಿ ಬೀದಿ ಬದಿಯಲ್ಲಿ ತಿರುಗಾಡುವ ಜಾನುವಾರುಗಳನ್ನು ಗೋಶಾಲೆಗಳಿಗೆ ಸೇರಿಸುವ ಕೆಲಸ ಮಾಡಲಾಗುತ್ತಿದೆ. ತಮ್ಮ ಜಾನುವಾರುಗಳನ್ನು ಬೀದಿಯಲ್ಲಿ ಬಿಡದೆ ಕಟ್ಟಿ ಹಾಕಿಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News