×
Ad

ಒಂಟಿ ಮಹಿಳೆಯರ ರಕ್ಷಣೆಗೆ ಸೂಕ್ತ ಕ್ರಮ: ಎಸ್ಪಿ ನಿಶಾ ಜೇಮ್ಸ್

Update: 2019-07-12 19:32 IST

ಉಡುಪಿ, ಜು.12: ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸ್ಥಳೀಯರೇ ಮುಂದೆ ಬಂದು ತಮ್ಮ ಪ್ರದೇಶದ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕಾಗಿದೆ. ಮನೆಯಲ್ಲಿ ಒಂಟಿಯಾಗಿರುವ ಹಿರಿಯರಿಗೆ ರಕ್ಷಣೆ ಒದಗಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಶುಕ್ರವಾರ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರು ಕರೆ ಮಾಡಿ, ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ಒಂಟಿ ಮಹಿಳೆ ರತ್ನಾವತಿ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಗಳನ್ನು ಶೀಘ್ರವೇ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಇಲಾಖೆ ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಸ್ಥಳೀಯರೇ ಸೇರಿ ತಮ್ಮ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ಪ್ರಕರಣಗಳನ್ನು ಶೀಘ್ರವೇ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ. ಸಿಸಿ ಕ್ಯಾಮೆರಾ ಇರುವುದು ಕಳ್ಳರ ಗಮನಕ್ಕೆ ಬಂದರೆ ಅವರು ಕಳವು ಅಥವಾ ಇತರ ಯಾವುದೇ ಅಪರಾಧ ಎಸಗಲು ಹೆದರುತ್ತಾರೆ. ಇದರಿಂದ ಇಡೀ ಗ್ರಾಮಕ್ಕೆ ಅನುಕೂಲವಾಗುತ್ತದೆ ಎಂದರು.

ಮೊಬೈಲ್ ಟಾಯ್ಲೆಟ್: ನಗರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಚಾರಿ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಕರೆ ಮಾಡಿ ಎಸ್ಪಿ ಅವರಿಗೆ ಸಲಹೆ ನೀಡಿದರು.

ಪೊಲೀಸರ ಬಗ್ಗೆ ಕಾಳಜಿ ವಹಿಸಿದ ವ್ಯಕ್ತಿಯನ್ನು ಅಭಿನಂದಿಸಿದ ಎಸ್ಪಿ, ಈ ಕುರಿತು ಪರಿಶೀಲನೆ ನಡೆಸಲಾಗುವುದು. ಮುಖ್ಯವಾಗಿ ಇದರಿಂದ ಮಹಿಳಾ ಸಂಚಾರಿ ಪೊಲೀಸರಿಗೆ ಸಹಾಯವಾಗಲಿದೆ ಎಂದರು.

ಉಡುಪಿ ಅಜ್ಜರಕಾಡು ಪಾರ್ಕ್‌ನಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿ ಗಳಿಂದ ಶಾಲಾ ವೇಳೆಯಲ್ಲಿ ಕಾಲಹರಣ ಮತ್ತು ಸಂಜೆ ವೇಳೆ ಕುಡುಕರ ಹಾವಳಿ, ಮಣಿಪಾಲಡಿಸಿ ಕಛೇರಿಗೆ ಹೋಗುವ ರಸ್ತೆಯ ಬಳಿ ರಸ್ತೆಯಲ್ಲೇ ವಾಹನ ಪಾರ್ಕಿಂಗ್, ಉಡುಪಿ ನಗರದ ಟ್ರಾಫಿಕ್ ಜಂಕ್ಷನ್‌ಗಳನ್ನು ಹೆಚ್ಚಿಸಿ ರುವುದರಿಂದ ನಗರ ಪ್ರವೇಶಿಸಲು ವಿಳಂಬ, ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಮಸ್ಯೆಗಳ ಕುರಿತು ದೂರುಗಳು ಬಂದವು.

ಸಾಲ ಮರುಪಾವತಿಸಿದ್ದರೂ ಹೆಚ್ಚಿನ ಹಣಕ್ಕಾಗಿ ಪೀಡನೆ, ಕೆಲವೊಂದು ಬಸ್ ನಿರ್ವಾಹಕರು ಶಾಲಾ ಮಕ್ಕಳು ಬಸ್ ಹತ್ತುವುದಕ್ಕೆ ಅವಕಾಶ ನೀಡದಿರುವುದು, ತಾಂತ್ರಿಕ ದೋಷವುಳ್ಳ ಸೈಲೆಂಸರ್‌ಗಳ ಬಳಕೆ, ಕಲ್ಯಾಣಪುರ ಸಂತೆಕಟ್ಟೆ ಬಳಿ ಫಾಸ್ಟ್-ಫುಡ್ ಅಂಗಡಿಗಳಿಂದ ಸಂಚಾರಕ್ಕೆ ತೊಂದರೆ, ಕಟಪಾಡಿ ವಾಹನ ಮತ್ತು ರಿಕ್ಷಾ ಪಾರ್ಕಿಂಗ್ ಸಮಸ್ಯೆ, ಅಂಬಾಗಿಲು ಮಾಸ್ತಿಯಮ್ಮ ದೇವಸ್ಥಾನದ ಬಳಿ ರಸ್ತೆಯ ಮೇಲೆಯೇ ವಾಹನ ಪಾರ್ಕಿಂಗ್ ಮಾಡುತ್ತಿರುವ ಕುರಿತ ದೂರು ಗಳು ಬಂದವು.

ಕಾರ್ಯಕ್ರಮದಲ್ಲಿ ಉಡುಪಿ ಡಿವೈಎಸ್ಪಿ ಜೈಶಂಕರ್, ವೃತ್ತ ನಿರೀಕ್ಷಕರಾದ ಹಾಲಮೂರ್ತಿ ರಾವ್, ಮಂಜಪ್ಪ, ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಸೀತಾರಾಮ, ಸಂಚಾರಿ ಪೊಲೀಸ್ ಉಪನಿರೀಕ್ಷಕ ನಾರಾಯಣ ಮೊದ ಲಾದವರು ಹಾಜರಿದ್ದರು.

16258 ಪ್ರಕರಣಗಳು ದಾಖಲು

ಉಡುಪಿ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಲ್ಲಿ 23 ಮಟ್ಕಾ ಪ್ರಕರಣ ಗಳಲ್ಲಿ 23, 8 ಜುಗಾರಿ ಪ್ರಕರಣಗಳಲ್ಲಿ 60, 2 ಅಬಕಾರಿ ಪ್ರಕರಣದಲ್ಲಿ ಇಬ್ಬರು, 17 ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ 19 ಮಂದಿಯನ್ನು ಬಂಧಿಸ ಲಾಗಿದೆ.

ಕೋಟ್ಪಾ- 118, ಕುಡಿದು ವಾಹನ ಚಾಲನೆ- 55, ಕರ್ಕಶ ಹಾರ್ನ್- 300, ಚಾಲನೆಯಲ್ಲಿ ಮೊಬೈಲ್ ಬಳಕೆ-92, ಹೆಲ್ಮೆಟ್ ರಹಿತ ವಾಹನ ಚಾಲನೆ- 4611, ಅತಿ ವೇಗದ ಚಾಲನೆ-181, ಇತರ ಮೋಟಾರ್ ಕಾಯಿದೆಗಳಡಿ 11019 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News