ಭಾರತದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುವ ರೀತಿ ಆತಂಕಕಾರಿ: ಅಮೆರಿಕ

Update: 2019-07-12 14:35 GMT

 ನ್ಯೂಯಾರ್ಕ್, ಜು.12: ಭಾರತದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಅಮೆರಿಕ ಸಂಸತ್ತು ಕಳವಳಗೊಂಡಿದೆ ಎಂದು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಜಾನ್ ಚೇಂಬರ್ಸ್(ಭಾರತ-ಅಮೆರಿಕ ವ್ಯೂಹಾತ್ಮಕ ಸಹಭಾಗಿತ್ವ ವೇದಿಕೆ)ನೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನ್ಯಾನ್ಸಿ, “ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ನಾವು ಹೆಮ್ಮೆಪಟ್ಟಿದ್ದೇವೆ. ಭಾರತದಲ್ಲಿ ಮುಸ್ಲಿಮರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ನಮಗೆ ಆತಂಕವಿತ್ತು ಮತ್ತು ಈಗಲೂ ಇದೆ ಎಂಬುದನ್ನು ನಾವು ಆಗಲೂ ಹೇಳಿದ್ದೆವು ಮತ್ತು ಈಗಲೂ ಹೇಳುತ್ತೇವೆ” ಎಂದು ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದ ಕುರಿತು ಈ ಸಂವಾದ ಕಾರ್ಯಕ್ರಮ ನಡೆದಿತ್ತು. ಭಾರತ ಮತ್ತು ಅಮೆರಿಕ ಸಂಬಂಧದ ಕುರಿತು ಉಲ್ಲೇಖಿಸಿದ ಅವರು, “ಉಭಯ ದೇಶಗಳ ಸಂಬಂಧ ಇಡೀ ವಿಶ್ವದ ಮಹತ್ವಕ್ಕೆ ಉತ್ತೇಜನ ನೀಡಲಿದೆ, ಇನ್ನಷ್ಟು ಮಾರುಕಟ್ಟೆಗಳನ್ನು ಸೃಜಿಸಲು ಹಾಗೂ ಹೆಚ್ಚಿನ ಉದ್ಯಮಶೀಲತೆಗೆ ಅವಕಾಶ ದೊರಕಲಿದೆ” ಎಂದು ಹೇಳಿದ್ದಾರೆ.

ಮೋದಿಯವರ ವಾಕ್ಚಾತುರ್ಯ ಕೌಶಲ್ಯವನ್ನು ಶ್ಲಾಘಿಸಿದ ಅವರು, ಮಾಜಿ ಪ್ರಧಾನಿ ಬರಾಕ್ ಒಬಾಮ ಜೊತೆ ಭಾರತಕ್ಕೆ ಭೇಟಿ ನೀಡಿದಾಗ ಮೋದಿ ಮಾಡಿದ ಭಾಷಣ ತಾನು ಕೇಳಿದ ಅತ್ಯದ್ಭುತ ಭಾಷಣಗಳಲ್ಲಿ ಒಂದಾಗಿತ್ತು ಎಂದಿದ್ದಾರೆ. ತನಗೆ ಗಾಂಧಿ ಸಿದ್ಧಾಂತದಲ್ಲಿ ವಿಶ್ವಾಸವಿದೆ. ಗಾಂಧಿಯವರು ಅಮೆರಿಕದ ಶಾಂತಿ ಹೋರಾಟದ ಆಧ್ಯಾತ್ಮಿಕ ನಾಯಕರಾಗಿದ್ದರು ಎಂದು ಪೆಲೋಸಿ ಹೇಳಿದರು. ಚೀನಾದೊಂದಿಗಿನ ಅಮೆರಿಕದ ಸಂಬಂಧ ಸಂಕೀರ್ಣವಾಗಿದೆ. ಚೀನಾವನ್ನು ಗಮನಿಸಿದರೆ ಬೆಳೆಯುತ್ತಿರುವ ಮಧ್ಯಮ ವರ್ಗ ಹಾಗೂ ಬೆಳೆಯುತ್ತಿರುವ ಆರ್ಥಿಕತೆಯನ್ನು ಕಾಣಬಹುದು. ಆದರೆ, ಚೀನಾ ಅತ್ಯಂತ ದಮನಕಾರಿ ದೇಶವೂ ಆಗಿದೆ. ಮೂರು ಮಿಲಿಯ ಉಯಿಘರ್ ಜನತೆಯನ್ನು ‘ಶಿಕ್ಷಣ ಶಿಬಿರ’ದಲ್ಲಿ ಇಡಲಾಗಿದೆ. ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವದ ಶಕ್ತಿಹೀನಗೊಳಿಸುತ್ತಿದ್ದಾರೆ ಎಂದರು. ಆದರೆ ಚೀನಾ ಹೊಗೆ ಮಾಲಿನ್ಯ ನಿಯಂತ್ರಣಕ್ಕೆ ಬೃಹತ್ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News