ಭಟ್ಕಳ: ಮೂರು ದಿನಗಳ ನಿರಂತರ ಮಳೆಗೆ ಲಕ್ಷಾಂತರ ರೂ. ನಷ್ಟ

Update: 2019-07-12 15:00 GMT

ಭಟ್ಕಳ: ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಬಿದ್ದ ಮಳೆಗೆ ಶುಕ್ರವಾರ ಬಿಡುವು ದೊರೆತಿದ್ದು ಮೂರು ದಿನಗಳಲ್ಲಿ ತಾಲೂಕಿನ ಜನತೆ ಹಲವು ಅವಾಂತರಗಳನ್ನು ಎದುರಿಸುವಂತಾಗಿದೆ. ಮಳೆಗೆ ತಾಲೂಕಿನಾದ್ಯಂತ ಹಲವು ಮನೆಗಳು ಕುಸಿದು ಬಿದ್ದಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಮಳೆಯಿಂದಾಗಿ ತಾಲೂಕಿನಾದ್ಯಂತ ಹಲವು ಅವಾಂತರಗಳಿಗೆ ಕಾರಣವಾಗಿದ್ದು, ಸಾಕಷ್ಟು ಕಡೆಗಳಲ್ಲಿ ವಿದ್ಯುತ್ ಕಂಬ ಬಿದ್ದು ಹಾನಿ ಸಂಭವಿಸಿದ್ದರ ಜೊತೆಗೆ ಇದೀಗ ಕೆಲವು ಕಡೆ ಭಾಗಶಃ ಮನೆಗಳು ಹಾಗೂ ಗೋಡೆಗಳು ಕುಸಿದಿವೆ. 

ಇಲ್ಲಿನ ಕಾಯ್ಕಿಣಿ ಗ್ರಾಮದ ಹೆರಾಡಿ ಮಜರೆಯ ಗಣಪತಿ ತಿಮ್ಮಪ್ಪ ನಾಯ್ಕ ಇವರ ವಾಸ್ತವ್ಯದ ಪಕ್ಕ ಮನೆಯು ಗಾಳಿ-ಮಳೆಗೆ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸದೇ ಹಾನಿಯ ಅಂದಾಜು 30 ಸಾವಿರ ರೂ. ಆಗಿದೆ.

ಇನ್ನು ಹೆಬಳೆ ಗ್ರಾಮದ ತೆಂಗಿನಗುಂಡಿ ಮಜರೆಯಲ್ಲಿ ಗೋವರ್ಧನ ಕೃಷ್ಣ ಕಾಮತ ಇವರ ಕಚ್ಚಾ ಅಂಗಡಿಯ ಗೋಡೆ ಕುಸಿದು ಬಿದ್ದ ಪರಿಣಾಮ ಅಲ್ಲೆ ಪಕ್ಕದಲ್ಲಿ ಇದ್ದ ಮಂಜುನಾಥ ಜಟ್ಟಾ ನಾಯ್ಕ ಇವರ ವಾಸ್ತವ್ಯದ ಮನೆಯ ಗೊಡೆಗೆ ಅಲ್ಪ ಪ್ರಮಾಣದ ಹಾನಿ ಆಗಿರುತ್ತದೆ. ಯಾವುದೇ ಜನ-ಜಾನುವಾರುಗಳಿಗೆ ತೊಂದರೆ ಆಗಿಲ್ಲವಾಗಿದೆ. ಮುಂಡಳ್ಳಿಯ  ಈಶ್ವರ ಶಂಕರಯ್ಯ ಹಳ್ಳೇರ ಇವರ ವಾಸ್ತವ್ಯ ಮನೆಯ ಹಿಂಭಾಗದ ಗೋಡೆ ಕುಸಿದಿದ್ದು, ಅಲ್ಲಿಯೂ ಸಹ ಯಾವುದೇ ಪ್ರಾಣಹಾನಿ ಉಂಟಾಗಿಲ್ಲವಾಗಿದ್ದು 20 ಸಾವಿರ ರೂ. ಹಾನಿ ಸಂಭವಿಸಿದೆ. 

ಇನ್ನುಳಿದಂತೆ ತಾಲೂಕಿನ ಬೇಂಗ್ರೆ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿಯಿಂದ ತುಂಡಾಗಿ ಬಿದ್ದಿದ್ದ ವೇಳೆ ನಾಯಿಯೊಂದು ತಂತಿ ಸ್ಪರ್ಶಿಸಿದ್ದು ಸ್ಥಳಕ್ಕೆ ಸಾವನ್ನಪ್ಪಿದ್ದು, ಹಾಗೂ ಬೆಳಕೆ ಪಂಚಾಯತ ವ್ಯಾಪ್ತಿಯ ಕಟಗೇರಿಯಲ್ಲಿ ಮರ ಬಿದ್ದು ವಿದ್ಯುತ ಕಂಬ ತುಂಡಾಗಿ ವಿದ್ಯುತ ತಂತಿ ಜೋತು ಬಿದಿದ್ದು ಸ್ಥಳಕ್ಕೆ ತೆರಳಿ ಹೆಸ್ಕಾಂ ಇಲಾಖೆ ಸಿಬ್ಬಂದಿಗಳು ವಿದ್ಯುತ ತಂತಿ ಸರಿಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News