ಜು.13ರಂದು ರಜೆ ಮೇಲೆ ಸ್ವದೇಶಕ್ಕೆ ತೆರಳಲು ಇಬ್ಬರಿಗೆ ಅವಕಾಶ

Update: 2019-07-12 15:51 GMT

ಮಂಗಳೂರು, ಜು.12: ಕುವೈತ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ಅತಂತ್ರ ಸ್ಥಿತಿಯಲ್ಲಿ ಇದ್ದ 34 ಮಂದಿ ಕರಾವಳಿಯ ಭಾರತೀಯ ಸಂತ್ರಸ್ತ ನೌಕರರ ಪೈಕಿ ಕೇವಲ ಇಬ್ಬರಿಗೆ ಮಾತ್ರ ಸ್ವದೇಶಕ್ಕೆ ಹೋಗಲು ಪಾಸ್‌ಪೋರ್ಟ್ ಲಭಿಸಿದೆ. ಆದರೆ ವೀಸಾ ರದ್ದುಗೊಂಡಿಲ್ಲ, ರಜೆಯ ಮೇಲೆ ಸ್ವದೇಶಕ್ಕೆ ಜು.13ರಂದು ತೆರಳುತ್ತಿದ್ದಾರೆ.

ರಾಯಭಾರಿ ಕಚೇರಿಯ ಅಧಿಕಾರಿಗಳು ಅನಿವಾಸಿ ಉದ್ಯಮಿ, ಕರಾವಳಿ ಮೂಲದ ಮೋಹನ್‌ ದಾಸ್ ಕಾಮತ್ ಕಂಪೆನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಇದರ ಫಲವಾಗಿ ಇಬ್ಬರಿಗೆ ಮಾತ್ರ ಪಾರ್ಸ್‌ಪೋರ್ಟ್ ಲಭಿಸಿದೆ. ಆದರೆ ಇವರ ವೀಸಾ ರದ್ದುಗೊಂಡಿಲ್ಲ.

ಸಂತ್ರಸ್ತರಿಗೆ ಉದ್ಯೋಗ ನೀಡಿದ ಕಂಪೆನಿ ಇವರಿಬ್ಬರ ಪಾಸ್‌ಪೋರ್ಟ್‌ನ್ನು ಶೋನ್‌ಗೆ ನೀಡಿರಲಿಲ್ಲ. ಹಾಗಾಗಿ ಇವರು ವೀಸಾ ರದ್ದುಗೊಳ್ಳದೆ ರಜೆಯ ಮೇಲೆ ತಾಯ್ನಾಡಿಗೆ ತೆರಳುತ್ತಿದ್ದಾರೆ. ಇನ್ನು ಆರು ತಿಂಗಳು ಕಾಲ ಕುವೈತ್‌ಗೆ ಹೋಗದಿದ್ದರೆ, ಸ್ವಯಂ ಆಗಿ ಇವರ ವೀಸಾ ರದ್ದುಗೊಳ್ಳಲಿದೆ. ಆದರೆ ಉಳಿದವರ ವೀಸಾ ರದ್ದತಿಗೆ ಉದ್ಯೋಗ ಕಂಪೆನಿ ಶೋನ್‌ಗೆ ಪಾಸ್‌ಪೋರ್ಟ್ ಕಳುಹಿಸಿರುವುದರಿಂದ ವೀಸಾ ರದ್ದತಿವರೆಗೆ ಕಾಯಬೇಕಾಗಿದೆ.

ಶುಕ್ರವಾರದಿಂದ ರಜೆ ಇರುವುದರಿಂದ ಉಳಿದವರ ಪಾಸ್‌ಪೋರ್ಟ್ ಸೋಮವಾರ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಮತ್ತು ಉತ್ತರಪ್ರದೇಶದ ಪಂಕಜ್ ಎಂಬ ಇಬ್ಬರು ಯುವಕರ ವೀಸಾ ಮಾತ್ರ ರದ್ದು ಮಾಡಿ ಪಾಸ್‌ಪೋರ್ಟ್ ಲಭಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ವಿಮಾನ ಟಿಕೆಟ್ ಮುಂದೂಡಿಕೆ: ಜು.13ರಂದು ಹೊರಡಬೇಕಿದ್ದ ಮೊದಲ ತಂಡದಲ್ಲಿ ಒಟ್ಟು ಒಂಭತ್ತು ಮಂದಿ ಭಾರತೀಯರಿದ್ದು, ಅಭಿಷೇಕ್ ಸೇರಿದಂತೆ ನಾಲ್ಕು ಮಂದಿ ಮಂಗಳೂರಿನವರಿದ್ದಾರೆ. ಇವರ ವಿಮಾನ ಟಿಕೆಟ್‌ನ ಪ್ರಾಯೋಜಕತ್ವವನ್ನು ಕುವೈತ್‌ನಲ್ಲಿರುವ ಅನಿವಾಸಿ ಭಾರತೀಯ ಮೋಹನ್‌ದಾಸ್ ಕಾಮತ್, ಬಿನಫಿಲೀಸ್ ಹಾಗೂ ಬಂಟರ ಸಂಘ ಕುವೈತ್ ವಹಿಸಿತ್ತು.

ಜು.13ಕ್ಕೆ ಕಾಯ್ದಿರಿಸಿದ ವಿಮಾನ ಟಿಕೆಟ್‌ನ್ನು ರದ್ದು ಮಾಡಿದರೆ ಮರಳಿ ಹಣ ಸಿಗುವುದಿಲ್ಲ. ಈ ಮುಂಗಡ ಟಿಕೆಟ್ ಪ್ರಯಾಣದ ದಿನವನ್ನು ಮುಂದೂಡಲಾಗಿದೆ. ಒಂದು ವೇಳೆ ಟಿಕೆಟ್ ರದ್ದುಪಡಿಸಬೇಕಾದ ಪ್ರಮೇಯ ಬಂದರೆ, ಅದರ ವೆಚ್ಚವನ್ನು ಕಂಪೆನಿಯೇ ಭರಿಸಬೇಕು ಎಂದು ರಾಯಭಾರಿ ಕಚೇರಿಯು ಉದ್ಯೋಗ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

 ಜು.15ರಂದು ಮತ್ತೆ 15 ಮಂದಿ ಆಂಧ್ರದವರು ಹೊರಡಲಿದ್ದು, ಅವರ ಟಿಕೆಟ್‌ನ್ನು ಅತಿಥಿ ಇಂಟರ್‌ನ್ಯಾಷನಲ್ ಹೊಟೇಲ್ ಮಾಲಕ ಆಕಾಶ್ ಪನ್ವಾರ್ ವಹಿಸಿದ್ದರು. ಜು.17ರಂದು ಮಂಗಳೂರಿನ 19 ಮಂದಿ ಬರಲಿದ್ದು, ಇವರ ಟಿಕೆಟ್‌ನ್ನು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹಾಗೂ ಇತರ ದಾನಿಗಳು ಭರಿಸಲು ನಿರ್ಧರಿಸಿದ್ದರು. ಆದರೆ ಈಗ ಮೊದಲ ತಂಡಕ್ಕೆ ಸಮಸ್ಯೆಯಾದ ಕಾರಣ ಎಲ್ಲರೂ ಆತಂಕಕ್ಕೊಳಗಾಗಿದ್ದಾರೆ.

ಕುವೈತ್‌ನಲ್ಲಿ ಅತಂತ್ರರಾದವರಿಗೆ ಕಂಪೆನಿ ನೀಡಿದ ಬಾಡಿಗೆ ಮನೆಯನ್ನೇ ಮುಂದುವರಿಸಲಾಗಿದೆ. ಇದರಲ್ಲಿ ಜು.17ರವರೆಗೆ ನಿಲ್ಲಲು ಮನೆ ಮಾಲಕರು ಒಪ್ಪಿಗೆ ನೀಡಿದ್ದಾರೆ. ಇದಕ್ಕಿಂತ ಮೊದಲೇ ಎರಡೆರಡು ಬಾರಿ ಮಾಲಕರು ತೆರವು ಮಾಡಲು ಹೇಳಿದ್ದರೂ ಅನಿವಾಸಿ ಭಾರತೀಯರ ವಿನಂತಿ ಮೇರೆಗೆ ಜು.17ರವರೆಗೆ ಮುಂದುವರಿಸಿದ್ದಾರೆ. ಆದರೆ ಆ ಬಳಿಕ ಮುಂದೇನು ಎನ್ನುವ ಚಿಂತೆಯಲ್ಲಿ ಸಂತ್ರಸ್ತರು ಇದ್ದಾರೆ.

ಜು.13ಕ್ಕೆ ಆಗಮನ

ಕುವೈತ್‌ನಲ್ಲಿ ಸಂಕಷ್ಟಕೀಡಾದವರಲ್ಲಿ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಕುವೈತ್‌ನ ವಿಮಾನ ನಿಲ್ದಾಣದಿಂದ ಜು.13ರಂದು ರಾತ್ರಿ 8:30ಕ್ಕೆ ಹಾಗೂ ಉತ್ತರ ಪ್ರದೇಶದ ಪಂಕಜ್ ಜು.13ರಂದು ರಾತ್ರಿ 9 ಗಂಟೆಗೆ ತೆರಳಲಿದ್ದಾರೆ. ಇವರು ಮುಂಬೈ ವಿಮಾನ ನಿಲ್ದಾಣಕ್ಕೆ ಜು.14ರ ನಸುಕಿನ ಜಾವ 3 ಗಂಟೆಗೆ ತಲುಪಲಿದ್ದಾರೆ ಎಂದು ಕರಾವಳಿ ಮೂಲದ ಮೋಹನ್‌ ದಾಸ್ ಕಾಮತ್ ತಿಳಿಸಿದ್ದಾರೆ.

ಪಾಸ್‌ಪೋರ್ಟ್ ಹಸ್ತಾಂತರ

ಜು.13ರಂದು ಸ್ವದೇಶಕ್ಕೆ ವಾಪಸಾಗಲಿರುವ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಹಾಗೂ ಉತ್ತರ ಪ್ರದೇಶದ ಪಂಕಜ್ ಅವರಿಗೆ ಪಾಸ್‌ಪೋರ್ಟ್ ಮತ್ತು ಟಿಕೆಟ್‌ಗಳನ್ನು ಕರಾವಳಿ ಮೂಲದ ಹಾಗೂ ಅನಿವಾಸಿ ಭಾರತೀಯ ಉದ್ಯಮಿಗಳು ಹಸ್ತಾಂತರಿಸಿದರು.

ಈ ಸಂದರ್ಭ ಕರಾವಳಿ ಮೂಲದ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಮೋಹನ್‌ ದಾಸ್ ಕಾಮತ್, ಇಲ್ಲೊಂಗೊವನ್, ಬಂಟರ ಸಂಘದ ಕುವೈತ್ ಅಧ್ಯಕ್ಷ ಗುರು ಪ್ರಸಾದ್ ಹೆಗ್ಡೆ, ಉಪಾಧ್ಯಕ್ಷ ಆರ್.ಶೆಟ್ಟಿ ಮತ್ತತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News