ಗುಂಪು ಹತ್ಯೆ ದೇಶದ ಸಂವಿಧಾನ ಬುಡಮೇಲು ಮಾಡುವ ಕೃತ್ಯ: ಪ್ರೊ.ಕೆ.ಫಣಿರಾಜ್

Update: 2019-07-12 16:11 GMT

ಉಡುಪಿ, ಜು.12: ದೇಶದಲ್ಲಿ ನಡೆಯುತ್ತಿರುವ ಗುಂಪು ಹತ್ಯೆಯನ್ನು ಕೇವಲ ಅಪರಾಧವಾಗಿ ನೋಡದೆ, ಅದನ್ನು ಸಂವಿಧಾನ ಮತ್ತು ಅದರ 15ನೆ ಪರಿಚ್ಛೇಧವನ್ನು ಬುಡಮೇಲು ಮಾಡುವ ಕೃತ್ಯವಾಗಿಯೂ ನೋಡಬೇಕಾಗಿದೆ ಎಂದು ಹಿರಿಯ ಚಿಂತಕ ಪ್ರೊ. ಕೆ.ಫಣಿರಾಜ್ ಹೇಳಿದ್ದಾರೆ.

ದಲಿತ ಹಿಂದುಳಿದ ಅಲ್ಪಸಂಖ್ಯಾತ ಪ್ರಗತಿಪರ ಸಂಘಟನೆಗಳ ಒಕ್ಕೂಟ ಉಡುಪಿ ಇದರ ನೇತೃತ್ವದಲ್ಲಿ ಗುಂಪು ಹಿಂಸೆ ಹಾಗೂ ಹತ್ಯೆಗಳನ್ನು ವಿರೋಧಿಸಿ ಶುಕ್ರವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಗುಂಪು ಹತ್ಯೆಗಳು ಸಂವಿಧಾನ ಮತ್ತು ಸಮಾನತೆಯನ್ನು ಬುಡಮೇಲು ಮಾಡುವ ಷಡ್ಯಂತ್ರದ ಒಂದು ಭಾಗವಾಗಿದೆ. ಈ ರೀತಿಯ ಸಂವಿಧಾನ ವಿರೋಧಿ ಗುಂಪು ಹತ್ಯೆಗಳಿಗೆ 1990ರ ಹಿಂದುತ್ವ ಮತ್ತು ಕೋಮುವಾದಿ ರಾಜಕೀಯವೇ ಕಾರಣ. ದೇಶದಲ್ಲಿರುವ ಸಂವಿಧಾನವನ್ನು ನಿಷ್ಕ್ರೀಯಗೊಳಿಸುವುದೇ ಈ ರಾಜಕೀಯದ ಉದ್ದೇಶವಾಗಿದೆ ಎಂದರು.

ಬಹುಜನ ಕ್ರಾಂತಿ ಮೋರ್ಚಾದ ಮುಖಂಡ ಜಯಂತ್ ಮಂಗಳೂರು ಮಾತನಾಡಿ, ಸ್ವಾತಂತ್ರ ನಂತರ ಭಾರತದಲ್ಲಿ ಅತ್ಯಂತ ಹೆಚ್ಚು ಕೊಲೆಯಾಗಿರುವುದು ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ. ಸಂವಿಧಾನ ಬದಲಾವಣೆ ಮಾಡುವ ಮನುವಾದಿಗಳ ಷಡ್ಯಂತ್ರದ ವಿರುದ್ಧ ದಲಿತರು ಜಾಗೃತರಾಗಬೇಕು. ಧರ್ಮದ ಹೆಸರಿನಲ್ಲಿ ನಾವೆಲ್ಲ ಒಂದು ಹೇಳುವ ಇವರು, ಜಾತಿಯ ಹೆಸರಿನಲ್ಲಿ ದಲಿತರನ್ನು ದೂರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದಸಂಸ ಮುಖಂಡ ಶೇಖರ್ ಹೆಜ್ಮಾಡಿ ಮಾತನಾಡಿ, ದೇಶದ ಕೆಲವು ಶಕ್ತಿಗಳು ದಲಿತರು, ಅಲ್ಪಸಂಖ್ಯಾತರನ್ನು ದಮನಿಸಿ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಯತ್ನಿಸುತ್ತಿದೆ. ದೇಶದಲ್ಲಿ ಆಚರಿಸಲಾಗುತ್ತಿರುವ ಅಸ್ಪೃಶ್ಯತೆ ಮತ್ತು ದೇವಸ್ಥಾನಕ್ಕೆ ಪ್ರವೇಶಿಸಿದ ಕಾರಣಕ್ಕೆ ದಲಿತರನ್ನು ಬೆತ್ತಲುಗೊಳಿಸಿ ಅವಮಾನಿಸುವುದು ಭಯೋತ್ಪಾದನೆಗಿಂತ ಘನಘೋರ ಅಪರಾಧವಾಗಿದೆ. ಕೇಸರಿ ಸರಕಾರ ದಿಂದ ನಮ್ಮನ್ನು ರಕ್ಷಿಸಬೇಕಾದ ಜಾತ್ಯತೀತ ಮುಖವಾಡಗಳ ಸರಕಾರಗಳು ಕಣ್ಣುಮುಚ್ಚಿ ಕುಳಿತಿವೆ ಎಂದು ದೂರಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ಇಂದು ದೇಶದಲ್ಲಿ ಅಸಹಿಷ್ಣುತೆ ಸೃಷ್ಠಿಯಾಗಿದೆ. ಧರ್ಮಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯ ಆಗುತ್ತಿದೆ. ಎಲ್ಲ ಕಡೆ ದಲಿತರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಗಳು ನಡೆಯುತ್ತಿವೆ. ಇಂದು ದೇಶದಲ್ಲಿ ವಿರೋಧ ಪಕ್ಷವೇ ಇಲ್ಲವಾಗಿದೆ. ಆದುದರಿಂದ ಜನರೇ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಸಿಐಟಿಯು ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಇದ್ರೀಸ್ ಹೂಡೆ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್ ಮಾತನಾಡಿದರು.

ಈ ಸಂದರ್ಭದಲ್ಲಿ ದಲಿತ ದಮನಿತರ ಸ್ವಾಭಿಮಾನಿ ಸಮಿತಿಯ ಶ್ಯಾಮ್‌ರಾಜ್ ಬಿರ್ತಿ, ದಸಂಸ ಮುಖಂಡರಾದ ಸುಂದರ ಮಾಸ್ತರ್, ವಾಸು ನೇಜಾರು, ಎಸ್.ನಾರಾಯಣ, ಅಂತಾರಾಷ್ಟ್ರೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಪ್ರಶಾಂತ್ ಜತ್ತನ್ನ, ಸಿಪಿಎಂ ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಶಶಿಧರ ಗೊಲ್ಲ, ಕವಿರಾಜ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಅನ್ವರ್ ಅಲಿ ಕಾಪು, ಮುಹಮ್ಮದ್ ವೌಲಾ, ಇಬ್ರಾಹಿಂ ಮಟಪಾಡಿ, ಅಝೀಝ್ ಉದ್ಯಾವರ, ಅಬ್ದುಲ್ ಖತೀಬ್ ರಶೀದ್ ಮೊದ ಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಕೆ.ಎಂ.ಮಾರ್ಗ, ಕೋರ್ಟ್ ರೋಡ್, ಜೋಡು ರಸ್ತೆ ಮಾರ್ಗವಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಸಮಾಪ್ತಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News