ಹೊಳೆಯಲ್ಲಿ ಮಗುವಿನ ಮೃತದೇಹ ಪತ್ತೆ: ತಾಯಿಯಿಂದಲೇ ಕೃತ್ಯ

Update: 2019-07-12 16:25 GMT

ಶಂಕರನಾರಾಯಣ, ಜು.12: ಸಿದ್ಧಾಪುರ ಸಮೀಪದ ಯಡಮೊಗೆ ಗ್ರಾಮದ ಕುಮ್ಟಿಬೇರು ಎಂಬಲ್ಲಿ ಜು.11ರಂದು ಬೆಳಗಿನ ಜಾವ ನಡೆದ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗು ಸಾನ್ವಿಕಾ ಅಪಹರಣ ಪ್ರಕರಣವು ತಿರುವು ಪಡೆದುಕೊಂಡಿದ್ದು, ಮಗುವಿನ ಮೃತ ದೇಹವು ಮನೆಯಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಕುಬ್ಜ ಹೊಳೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.

ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಸಮೀಪದ ಕುಬ್ಜ ಹೊಳೆಗೆ ಆತ್ಮಹತ್ಯೆ ಮಾಡಲು ಹೋಗಿದ್ದ ವೇಳೆ ಸಾನ್ವಿಕಾ ಕೈಯಿಂದ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ತಾಯಿ ರೇಖಾ ನಾಯ್ಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಮಾನಸಿಕ ಖಿನ್ನತೆಗೆ ಒಳಗಾಗಿರುವ ರೇಖಾ ನಾಯ್ಕಗೆ ಮಾನಸಿಕ ತಜ್ಞ ಮೂಲಕ ಕೌನ್ಸಿಲಿಂಗ್ ನಡೆಸಲಾಗಿದೆ.

ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಹೊಸಂಗಡಿ ಗ್ರಾಮದ ಕಾರೂರು ಶೇಡಿಗುಡ್ಡೆ ಹೊಳೆಯಲ್ಲಿ ಮಗುವಿನ ಮೃತದೇಹ ಹೊಳೆಯ ಮಧ್ಯೆ ಇರುವ ಗಿಡಗಳಿಗೆ ಸಿಲುಕಿ ಪತ್ತೆಯಾಗಿದೆ. ಸ್ಥಳೀಯರು ಮಗುವಿನ ಮೃತದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕುಂದಾಪುರ ಡಿವೈಎಸ್ಪಿ ದಿನೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಲಾಗಿದೆ.

ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ

ರೇಖಾ ಮನೆಯಲ್ಲಿ ಸಂತೋಷ್ ನಾಯ್ಕರ ತಾಯಿ ಕೂಡ ವಾಸವಾಗಿದ್ದು, ಅತ್ತೆ ಮತ್ತು ಸೊಸೆ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತೆನ್ನಲಾಗಿದೆ. ಜು.10 ರಂದು ಇವರ ಮಧ್ಯೆ ಜಗಳ ನಡೆದಿದ್ದು, ಇದೇ ಸಿಟ್ಟಿನಲ್ಲಿ ಸಂತೋಷ್ ನಾಯ್ಕರ ತಾಯಿ ತನ್ನ ಮಗಳ ಮನೆಗೆ ಹೋಗಿದ್ದರು. ಈ ವಿಚಾರದಲ್ಲಿ ಸಂತೋಷ್ ನಾಯ್ಕ ತನ್ನ ಪತ್ನಿ ಜೊತೆ ಜಗಳ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೊಸಂಗಡಿಯ ಸಂಡೂರಿನ ಪವರ್ ಹೌಸ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಜು.10ರಂದು ರಾತ್ರಿ ಕೆಲಸಕ್ಕೆ ಹೋಗಿದ್ದು, ಅಂದು ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ರೇಖಾ ತನ್ನ ಇಬ್ಬರು ಮಕ್ಕಳಾದ ಸಾತ್ವಿಕ್ ಹಾಗೂ ಸಾನ್ವಿಕಾ ಜೊತೆ ಮನೆ ಸಮೀಪದ ಕುಬ್ಜ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಈ ವೇಳೆ ಮಗು ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇವರಿಬ್ಬರು ಹೊಳೆ ಮಧ್ಯೆ ಸಿಲುಕಿಕೊಂಡರೆನ್ನಲಾಗಿದೆ. ಸಾತ್ವಿಕ್ ಬಂಡೆಯ ಮಧ್ಯೆ ಮತ್ತು ರೇಖಾ ಮರದ ನಡುವೆ ಸಿಲುಕಿ ಕೊಂಡಿದ್ದರು. ಇವರಿಬ್ಬರನ್ನು ಸ್ಥಳೀಯರು ರಕ್ಷಿಸಿ ಮೇಲಕ್ಕೆ ತಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಹರಣದ ಕಥೆ ಕಟ್ಟಿದ ತಾಯಿ

ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದನ್ನು ತಿಳಿದ ರೇಖಾ ಭಯ ಭೀತಳಾಗಿ ತನ್ನ ಮಗುವಿನ ಅಪಹರಣದ ಕಥೆ ಹಣೆದು ಪೊಲೀಸರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ.

ಮನೆಯಲ್ಲಿ ಮಲಗಿದ್ದ ವೇಳೆ ಮುಸುಕುಧಾರಿ ಅಪರಿಚಿತ ತನ್ನ ಮಗುವನ್ನು ಅಪಹರಿಸಿ, ಕುಬ್ಜ ಹೊಳೆಯನ್ನು ದಾಟಿ ಹೋಗಿದ್ದಾನೆ. ಆದರೆ ನಾನು ಮತ್ತು ಮಗು ಆತನ ಹಿಂದೆ ಹೋಗುವಾಗ ನಾವಿಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ನಮ್ಮನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ರೇಖಾ ಕಥೆ ಕಟ್ಟಿದ್ದಾರೆ.

ಅದರಂತೆ ಶಂಕರನಾರಾಯಣ ಪೊಲೀಸರು ರೇಖಾ ನೀಡಿದ ದೂರಿನಂತೆ ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ಬಗ್ಗೆ ಪೊಲೀಸರು ಹಾಗೂ ಸ್ಥಳೀಯರಿಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿದ್ದು, ಬೇರೆ ಬೇರೆ ದಿಕ್ಕಿನಲ್ಲಿ ತನಿಖೆ ನಡೆಸಿದ್ದರು. ಇದೀಗ ಮಗುವಿನ ಮೃತದೇಹ ಪತ್ತೆಯಾಗಿರುವುದರಿಂದ ಇದೊಂದು ಸುಳ್ಳು ಕಥೆ ಎಂಬುದು ಬಹಿರಂಗಗೊಂಡಿದೆ.

ಪೊಲೀಸರು ರೇಖಾಗೆ ಮಾನಸಿಕ ತಜ್ಞರ ಮೂಲಕ ಕೌನ್ಸಿಲಿಂಗ್ ನಡೆಸಿ ಹೇಳಿಕೆ ಪಡೆದುಕೊಳ್ಳಲಾಗಿದೆ. ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಕುರಿತು ಪೊಲೀಸರು ಸಮಾಲೋಚನೆ ನಡೆಸುತ್ತಿದ್ದಾರೆ. ಸದ್ಯ ಆಕೆಯನ್ನು ವಿಚಾರಣೆ ನಡೆಸಿ ಬಿಡಲಾಗಿದ್ದು, ಆಕೆ ತನ್ನ ಪತಿ ಮನೆಯಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

''ಮಗುವಿನ ಅಪಹರಣ ಸುಳ್ಳು ಕಥೆ ಎಂಬುದಾಗಿ ರೇಖಾ ನಾಯ್ಕ ಇದೀಗ ಒಪ್ಪಿಕೊಂಡಿದ್ದು, ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಹೇಳಿಕೆ ನೀಡಿದ್ದಾಳೆ. ಆದರೆ ಆಕೆಯನ್ನು ವಶಕ್ಕೆ ತೆಗೆದುಕೊಂಡಿಲ್ಲ. ಮಗುವಿನ ಮರಣೋತ್ತರ ಪರೀಕ್ಷೆ, ರೇಖಾ ನಾಯ್ಕ ಹೇಳಿಕೆ ಹಾಗೂ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು''.

-ನಿಶಾ ಜೇಮ್ಸ್, ಪೊಲೀಸ್ ಅಧೀಕ್ಷಕಿ, ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News