ರೂಟ್ ತಪ್ಪಿಸಿ ಚಲಿಸುವ ಬಸ್‌ಗಳ ಚಾಲಕ-ಮಾಲಕರ ವಿರುದ್ಧ ಕ್ರಮ: ಸಂದೀಪ್ ಪಾಟೀಲ್

Update: 2019-07-12 16:29 GMT

ಮಂಗಳೂರು, ಜು.12: ರೂಟ್ ತಪ್ಪಿಸಿ ಬಸ್‌ಗಳನ್ನು ಚಲಾಯಿಸುವ ಚಾಲಕರು ಮತ್ತು ಮಾಲಕರಿಗೆ ಲಿಖಿತ ನೊಟೀಸ್ ನೀಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಿ ಅವರು ಮಾತನಾಡಿದರು.

ರೂಟ್ ನಂ. 60ರ ಬಸ್ ಮಾಲೆಮಾರ್ ಮಾರ್ಗವಾಗಿ ಸಂಚರಿಸ ಬೇಕಾಗಿತ್ತು. ಆದರೆ ಅದು ಮಾರ್ಗ ಬದಲಾಯಿಸಿ ಓಡಾಡುತ್ತಿವೆ. 15 ನಂಬ್ರದ ಸಿಟಿ ಬಸ್ಸುಗಳು ಮೋರ್ಗನ್ಸ್‌ಗೇಟ್ ಮಾರ್ಗವಾಗಿ ಸಂಚರಿಸಬೇಕಿದ್ದರೂ ಅವುಗಳನ್ನು ಬೆಳಗ್ಗೆ ಮತ್ತು ಸಂಜೆ ಹೊತ್ತು ಮಾರ್ಗ ಬದಲಾಯಿಸಿ ಮಾರ್ನಮಿಕಟ್ಟೆ-ಕಾಸ್ಸಿಯಾ ಶಾಲೆಯ ಮಾರ್ಗದಲ್ಲಿ ಚಲಾಯಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ನಾಗರಿಕರು ದೂರು ನೀಡಿದರು.

ಕೊಡಿಯಾಲ್‌ಬೈಲ್‌ನ ಶ್ರೀಕೃಷ್ಣ ಟವರ್ಸ್‌ (ಎಂ.ಜಿ. ರೋಡ್) ಎದುರು ವಾಹನ ಪಾರ್ಕಿಂಗ್‌ಗೆ ಜಾಗವಿಲ್ಲ. ಫುಟ್‌ಪಾತ್‌ನಲ್ಲಿ ನಿಲ್ಲಿಸಿದರೆ ಪೊಲೀಸರು ಟೋಯಿಂಗ್ ಮಾಡುತ್ತಾರೆ. ಹಾಗಿರುವಾಗ ವಾಹನವನ್ನು ಎಲ್ಲಿ ನಿಲ್ಲಿಸಬೇಕು ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಸಂದೀಪ್ ಪಾಟೀಲ್ ಫುಟ್‌ಪಾತ್‌ನಲ್ಲಿ ವಾಹನ ನಿಲ್ಲಿಸಿದರೆ ಪಾದಚಾರಿಗಳು ಓಡಾಡುವುದು ಹೇಗೆ ? ಹಾಗಾಗಿ ಫುಟ್‌ಪಾತ್ ಮೇಲೆ ವಾಹನ ಪಾರ್ಕಿಂಗ್‌ಗೆ ಅವಕಾಶ ಕೊಡುವುದಿಲ್ಲ ಎಂದರು.

ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ತೊಕ್ಕೊಟ್ಟು-ಕೊಣಾಜೆ ಮಾರ್ಗವಾಗಿ ಅಮ್ಮೆಂಬಳ ದರ್ಗಾಕ್ಕೆ ಸಂಚರಿಸುವ ಬಸ್ ಬಿಜೈನಿಂದ ಮಧ್ಯಾಹ್ನ 3 ಗಂಟೆ ಬದಲು 3:15ಕ್ಕೆ ಬಿಡುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದು ಅಮ್ಮೆಂಬಳದ ನಾಗರಿಕರೊಬ್ಬರು ಮನವಿ ಮಾಡಿದರು.

ಶುಕ್ರವಾರ ನಡೆದ 120ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಆಯುಕ್ತರು 29 ಕರೆಗಳು ಬಂದವು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್ ಇನ್‌ಸ್ಪೆಕ್ಟರ್‌ಗಳಾದ ಗುರುದತ್ತ ಕಾಮತ್, ಅನಂತ್ ಮುರ್ಡೇಶ್ವರ, ಎಸ್ಸೈ ಪೂವಪ್ಪ ಎಚ್. ಎಂ., ಎಎಸ್ಸೈ ಪಿ. ಯೋಗೇಶ್ವರನ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.

ಜನಪ್ರತಿನಿಧಿಗಳೇ ಹೀಗೆ ಮಾತಾಡಿದರೆ ಹೇಗೆ?

ಮಾಜಿ ಕಾರ್ಪೊರೇಟರ್ ಮೋಹನ್ ಪಡೀಲ್ ಕರೆ ಮಾಡಿ, ಬಿಕರ್ನಕಟ್ಟೆ ಕೈಕಂಬದಲ್ಲಿ ತರಕಾರಿ ಸಂತೆಗೆ ಬರುವ ಗ್ರಾಹಕರು ರಸ್ತೆ ಬದಿ ವಾಹನ ನಿಲ್ಲಿಸಿದರೆ ಅದನ್ನು ಟೋಯಿಂಗ್ ಮಾಡಲಾಗುತ್ತಿದೆ. ವಾಹನವನ್ನು ಬೇರೆ ಎಲ್ಲಿ ನಿಲ್ಲಿಸಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತರು ಜನ ಪ್ರತಿನಿಧಿಗಳಾಗಿ ಕೆಲಸ ಮಾಡಿದ ಅನುಭವ ಇರುವ ನೀವು ನಗರದ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ನಿಮ್ಮಂಥವರೇ ಹೀಗೆ ಮಾತನಾಡಿದರೆ ಹೇಗೆ? ಸಮಸ್ಯೆ ಪರಿಹರಿಸುವವರು ಯಾರು? ಎಂದು ಮರು ಪ್ರಶ್ನಿಸಿದರು.

ಶಾಲಾ ವಾಹನ ಬಿಕ್ಕಟ್ಟು ಪರಿಹರಿಸಲು ಆಗ್ರಹ ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳ ಚಾಲಕ/ಮಾಲಕರು 2 ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಇದರ ಪರಿಣಾಮವಾಗಿ ಕೆಲವು ಪೋಷಕರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಹಾಗಾಗಿ ಈ ಬಿಕ್ಕಟ್ಟು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯು ಹಲವರಿಂದ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು ಈ ಬಗ್ಗೆ ಕೂಡಲೇ ಗಮನಹರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ತಾರತಮ್ಯ ಯಾಕೆ ?

ಪೊಲೀಸರು ರಿಕ್ಷಾಗಳ ಓವರ್ ಲೋಡ್ ಬಗ್ಗೆ ಮಾತ್ರ ಕ್ರಮ ಜರಗಿಸುತ್ತಿದ್ದಾರೆ. ಆದರೆ ಸಿಟಿ ಬಸ್‌ಗಳ ಓವರ್ ಲೋಡ್‌ಗಳ ಬಗ್ಗೆ ಕ್ರಮಕೈಗೊಳ್ಳು ತ್ತಿಲ್ಲ ಯಾಕೆ? ಎಂದು ರಿಕ್ಷಾ ಚಾಲಕರೊಬ್ಬರು ಪ್ರಶ್ನಿಸಿದರು. ಓವರ್‌ಲೋಡ್ ಮಾಡುವ ಎಲ್ಲಾ ವಾಹನಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಈ ವಿಷಯದಲ್ಲಿ ತಾರತಮ್ಯ ಇಲ್ಲ ಎಂದು ಆಯುಕ್ತರು ಸ್ಪಷ್ಪಪಡಿಸಿದರು.

ಸಿಗ್ನಲ್ ಲೈಟ್ ಸಮಸ್ಯೆ ಅಧ್ಯಯನ

ಪಿವಿಎಸ್ ಜಂಕ್ಷನ್‌ನಲ್ಲಿರುವ ಸಿಗ್ನಲ್ ಲೈಟ್ ಎಂ.ಜಿ. ರಸ್ತೆ ಕಡೆಯಿಂದ ಬರುವ ವಾಹನಗಳ ಚಾಲಕರಿಗೆ ಸರಿಯಾಗಿ ಕಾಣಿಸುತ್ತಿಲ್ಲ ಎಂದು ನಾಗರಿಕರು ದೂರು ನೀಡಿದರು. ಈ ಸಿಗ್ನಲ್ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News