ಹಮಾಲಿ ಕಾರ್ಮಿಕರಿಂದ ಮಂಗಳೂರು ಎಪಿಎಂಸಿ ಚಲೋ
ಮಂಗಳೂರು, ಜು.12: ನಗರ ಹೊರವಲಯದ ಬೈಕಂಪಾಡಿಯಲ್ಲಿರುವ ಎಪಿಎಂಸಿ ಕಚೇರಿಯ ಮುಂದೆ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರ ಸಂಘಟನೆಯಾದ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಗುರುವಾರ ಬಂದರು ಸಗಟು ಮಾರುಕಟ್ಟೆಯ ಎಲ್ಲಾ ಹಮಾಲರಿಗೆ ಎಪಿಎಂಸಿ ಲೈಸನ್ಸ್ ನೀಡಲು ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಎಪಿಎಂಸಿ ಚಲೋ ಪ್ರತಿಭಟನೆ ನಡೆಯಿತು.
ಈ ಸಂದರ್ಭ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಕೆ.ಮಹಾಂತೇಶ್ ಮಾತನಾಡಿ ಅಸಂಘಟಿತ ಕಾರ್ಮಿಕರಲ್ಲಿ ಅತ್ಯಂತ ಶ್ರಮದಾಯಕ ಮತ್ತು ಅಪಾಯಕಾರಿ ಕೆಲಸ ನಿರ್ವಹಿಸುವ ಹಾಗೂ ವ್ಯಾಪಾರ ವಹಿವಾಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ನಿರ್ಲಕ್ಷಿಸುವ ನೀತಿಗಳನ್ನು ಒಪ್ಪಲು ಸಾಧ್ಯವಿಲ್ಲ. ಹಮಾಲರ ಶ್ರಮಕ್ಕೆ ಸರಿಯಾಗಿ ಪ್ರತಿಫಲ ನೀಡದೆ ಅನ್ಯಾಯ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಕೃಷಿ ಮಾರಾಟ ಮಂಡಳಿ ಮತ್ತು ಇಲಾಖೆಯಲ್ಲಿ ಜಾರಿ ಮಾಡಲಾದ ಯಾವುದೇ ಯೋಜನೆಗಳು ಮಂಗಳೂರಿನ ಹಮಾಲಿಗಳಿಗೆ ಸಿಗುತ್ತಿಲ್ಲ. ಆಡಳಿತ ಮಂಡಳಿಯ ಇಚ್ಛಾಶಕ್ತಿ ಮತ್ತು ಸಿಬ್ಬಂದಿಯ ಕೊರತೆಯೇ ಇದಕ್ಕೆ ಕಾರಣ ಎಂದು ಮಹಾಂತೇಶ್ ದೂರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮ್ತಿಯಾಝ್ ಮಾತನಾಡಿ ಮಂಗಳೂರು ಎಪಿಎಂಸಿ ಮಾರುಕಟ್ಟೆಯ ಉಪ ಮಾರುಕಟ್ಟೆ ಎಂದು ಹೈಕೋರ್ಟ್ ತೀರ್ಪು ನೀಡಿ 8 ವರ್ಷಗಳಾಗಿದೆ. ಆದರೆ ಇದುವರೆಗೂ ಸಮರ್ಪಕವಾಗಿ ಹಮಾಲಿ ಲೈಸನ್ಸ್ ನೀಡಿಲ್ಲ. ಲೈಸನ್ಸ್ ಇಲ್ಲದಿದ್ದರೆ ಯಾವುದೇ ಸೌಲಭ್ಯಗಳು ಪಡೆಯಲು ಸಾಧ್ಯವಿಲ್ಲ. ಮಂಗಳೂರು ಎಪಿಎಂಸಿಯಲ್ಲಿ 1,000ಕ್ಕೂ ಹೆಚ್ಚು ವರ್ತಕರಿದ್ದಾರೆ ಆದರೆ ಹಮಾಲಿ ಲೈಸನ್ಸ್ ಇರುವುದು ಕೇವಲ 83 ಮಂದಿಗೆ ಮಾತ್ರ. ಲೈಸನ್ಸ್ ಇರುವವರು ನವೀಕರಣ ಮಾಡುವಾಗ ಅನಗತ್ಯ ದಾಖಲೆ ಕೇಳಿ ಸತಾಯಿಸಲಾಗುತ್ತಿದೆ. ಮಂಗಳೂರು ಎಪಿಎಂಸಿ ಆಡಳಿತಕ್ಕೆ ತೆರಿಗೆ ಸೋರಿಕೆ ತಡೆಯಲಾಗುತ್ತಿಲ್ಲ ಎಂದು ಆರೋಪಿಸಿದರಲ್ಲದೆ, ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಅಧ್ಯಕ್ಷ ಪಿ.ಎಸ್.ವಿಲ್ಲಿ ವಿಲ್ಸನ್ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಲ್ಲಿ ಬಂದರು ಶ್ರಮಿಕರ ಸಂಘದ ಮುಖಂಡರಾದ ಹರೀಶ್ ಕೆರೆಬೈಲ್, ಹಸನ್ ಮೋನು, ಚಂದ್ರಹಾಸ್ ಬಬ್ಬುಕಟ್ಟೆ, ಯಲ್ಲಪ್ಪ, ಹಂಝ ಜಪ್ಪಿನಮೊಗರು, ಸಿದ್ದಿಕ್ ಬೆಂಗರೆ, ಮಾದವ ಕಾವೂರ್, ಫಾರೂಕ್ ಉಳ್ಳಾಲ, ಶರೀಫ್ ಕುಪ್ಪೆಪದವು, ಮೊಯಿದಿನ್ ಎಂ.ಆರ್. ಉಪಸ್ಥಿತರಿದ್ದರು.