ಮಂಗಳೂರು: ನ್ಯಾಯಾಲಯದ ಆವರಣದಲ್ಲಿ ರಕ್ತದ ಕಲೆ !
ಮಂಗಳೂರು, ಜು.12: ದ.ಕ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಶುಕ್ರವಾರ ಮಧ್ಯಾಹ್ನ ರಕ್ತದ ಕಲೆ ಕಂಡು ಬಂದಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.
ಮಧ್ಯಾಹ್ನ 2:30ರ ಸುಮಾರು ಕಸ ಗುಡಿಸುವ ಕಾರ್ಮಿಕರು ರಕ್ತ ಚೆಲ್ಲಿರುವುದನ್ನು ಗಮನಿಸಿದ್ದಾರೆ. ಬಳಿಕ ಅಲ್ಲಿ ಸೇರಿದ ವಕೀಲರು ಮಂಗಳೂರು ಉತ್ತರ (ಬಂದರ್) ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿದ್ದಾರೆ. ನ್ಯಾಯಾಲಯದ ಎದುರು ಪ್ರವೇಶದ್ವಾರದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ರಕ್ತ ಚೆಲ್ಲಿದೆ. ಇಲ್ಲಿ ಪಾರ್ಕ್ ಮಾಡಲಾಗಿದ್ದ ವಕೀಲರೊಬ್ಬರ ಸ್ಕಾರ್ಪಿಯೋ ವಾಹನದ ಮೇಲೂ ರಕ್ತ ಎರಚಲ್ಪಟ್ಟಿದೆ.
ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಸಿಬ್ಬಂದಿ ಆಗಮಿಸಿ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಇಲ್ಲಿರುವ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ಆದರೆ ಘಟನೆ ನಡೆದ ಪ್ರದೇಶ ಸಿಸಿ ಕ್ಯಾಮರಾದಲ್ಲಿ ದಾಖಲಾಗದೆ ಇರುವುದರಿಂದ ಏನಾಗಿದೆ ಎನ್ನುವುದು ತಿಳಿದುಬಂದಿಲ್ಲ.
ತಲವಾರಿನಿಂದ ಕಡಿದು ಗಾಯಗೊಳಿಸಿದಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಲ್ಲಿಂದ ಕಾರಲ್ಲಿ ಹೋಗಿರುವ ಸಾಧ್ಯತೆ ಇದೆ. ಈ ಘಟನೆಯನ್ನು ನೋಡಿದವರು ಯಾರೂ ಇಲ್ಲ. ಬಂದರ್ ಠಾಣಾ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.