ಮಂಗಳೂರು: ಅಂತರ್ ಜಿಲ್ಲಾ ಕುಖ್ಯಾತ ದನಕಳವು ಆರೋಪಿ ಸೆರೆ

Update: 2019-07-12 16:51 GMT

ಮಂಗಳೂರು, ಜು.12: ಅಂತರ್ ಜಿಲ್ಲಾ ದನಕಳವು ಆರೋಪ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಮಂಗಳೂರು ವಿಶೇಷ ಅಪರಾಧ ಪತ್ತೆ ದಳ ಕಾರ್ಯಾಚರಣೆ ನಡೆಸಿ ಮೂಡುಬಿದಿರೆ ತೋಡಾರ್‌ನಲ್ಲಿ ಬಂಧಿಸಿದ್ದಾರೆ.

ಮೂಡುಬಿದಿರೆ ತೋಡಾರ್ ನಿವಾಸಿ ಬಶೀರ್ ಯಾನೆ ಆರ್ಗಾ ಬಶೀರ್ (42) ಬಂಧಿತ ಆರೋಪಿ.

ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಶ್ರೀನಿವಾಸ್ ಆರ್. ಗೌಡ ನೇತೃತ್ವದ ವಿಶೇಷ ಅಪರಾಧ ಪತ್ತೆ ದಳಕ್ಕೆ ದೊರೆತ ಖಚಿತ ವರ್ತಮಾ ನದ ಮೇರೆಗೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.

ಆರೋಪಿ ಬಶೀರ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈತನ ಚಹಚರರ ಬಂಧನವಾದರೂ ಈತ ತಲೆಮರೆಸಿಕೊಂಡಿದ್ದ. ಬಳಿಕ ನ್ಯಾಯಾಲಯದಿಂದ ಮುಂಜಾಗ್ರತಾ ಜಾಮೀನು ಪಡೆದಿದ್ದ. ಆನಂತರ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ಉಜಿರೆಯ ಬಳಿ ದನಕಳವು ಮಾಡಿ ಸಾಗಿಸುತ್ತಿದ್ದಾಗ ವಾಹನ ಅಡಿಮೇಲಾಗಿ ವಾಹನದಲ್ಲಿದ್ದ ದನಗಳೆಲ್ಲ ಸತ್ತಿದ್ದವು. ಈ ವಾಹನದಲ್ಲಿ ಈತನೇ ಚಾಲಕನಾಗಿ ಘಟನೆಯ ಬಳಿಕ ತಲೆಮರೆಸಿಕೊಂಡಿದ್ದನು. ಅಲ್ಲದೆ, ಸುರತ್ಕಲ್ ಕೃಷ್ಣಾಪುರ ನೈತಂಗಡಿ ಬಳಿ ಗೀತಾ ಎಂಬವರ ಮನೆಯಿಂದ ದನಕಳವು ಮಾಡಿದ ಆರೋಪಿಗಳ ಪೈಕಿ ಈತನೇ ಪ್ರಮುಖ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ಪ್ರಕರಣ: ಆರೋಪಿ ಬಶೀರ್ ವಿರುದ್ಧ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಕೊಡಗು ಜಿಲ್ಲೆಯ ವಿರಾಜಪೇಟೆ ಠಾಣೆಯಲ್ಲಿ ಒಂದು ಪ್ರಕರಣ ದ.ಕ. ಜಿಲ್ಲೆಯ ವೇಣೂರು ಠಾಣೆಯಲ್ಲಿ ಎರಡು ಪ್ರಕರಣ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮೂಡುಬಿದಿರೆ ಠಾಣೆಯಲ್ಲಿ ಎರಡು ಪ್ರಕರಣ ಹಾಗೂ ಬಜ್ಪೆ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಮೂಡುಬಿದಿರೆ ಪೊಲೀಸರ ಸಹಕಾರದೊಂದಿಗೆ ಮೂಡುಬಿದಿರೆ ತೋಡಾರ್‌ನಲ್ಲಿ ಬಂಧಿಸಿದ ಅಪರಾಧ ಪತ್ತೆ ದಳ, ಮುಂದಿನ ಕ್ರಮಕ್ಕಾಗಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟಿಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀನಿವಾಸ್ ಆರ್. ಗೌಡ ನೇತೃತ್ವ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷಕರಾದ ಪರಶಿವಮೂರ್ತಿ, ಸುರತ್ಕಲ್ ಪೊಲೀಸ್ ಠಾಣಾ ನಿರೀಕ್ಷಕ ರಾಮಕೃಷ್ಣ ಕೆ.ಜಿ., ಮಂಗಳೂರು ಉತ್ತರ ಉಪವಿಭಾಗದ ವಿಶೇಷ ಅಪರಾಧ ಪತ್ತೆ ದಳದ ಅಧಿಕಾರಿ ಸಿಬ್ಬಂದಿ ಎಎಸ್ಸೈ ಮುಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ., ವಿಜಯ ಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ ಹಾಗೂ ಮೂಡುಬಿದಿರೆ ಠಾಣಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News