ವಿಶ್ವಕಪ್ ಸೆಮಿ ಫೈನಲ್: ಧೋನಿ 7ನೇ ಕ್ರಮಾಂಕದಲ್ಲಿ ಆಡಿದ್ದೇಕೆ? ಇಲ್ಲಿದೆ ರವಿ ಶಾಸ್ತ್ರಿ ಉತ್ತರ

Update: 2019-07-13 08:41 GMT

ಲಂಡನ್, ಜು.13: ನ್ಯೂಝಿಲ್ಯಾಂಡ್ ವಿರುದ್ಧದ ನಿರ್ಣಾಯಕ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿರುವುದಕ್ಕೆ ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ ಹಾಗೂ ಸುನೀಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಧೋನಿಯನ್ನು 5ನೇ ಕ್ರಮಾಂಕದಲ್ಲಿ ಆಡಿಸಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು. ವಿಕೆಟ್‌ಗಳ ಪತನ ನಿಲ್ಲುತ್ತಿತ್ತು ಎಂದು ಹೇಳಿದ್ದಾರೆ. ಧೋನಿಯನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ್ದೇಕೆ ಎಂಬ ಕುರಿತು ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

 ‘‘ಧೋನಿ ಅವರನ್ನು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿದ್ದು ತಂಡದ ನಿರ್ಧಾರವಾಗಿತ್ತು. ಇದೊಂದು ಸರಳ ನಿರ್ಧಾರವೂ ಹೌದು. ಧೋನಿ ಅವರ ಅನುಭವ ಆ ಸಂದರ್ಭದಲ್ಲಿ ತಂಡಕ್ಕೆ ಅಗತ್ಯವಿತ್ತು. ಅವರು ಅತ್ಯುತ್ತಮ ಫಿನಿಶರ್. ಅವರನ್ನು ಅಂದು ಹಾಗೆ ಬಳಸಿಕೊಳ್ಳದಿದ್ದರೆ ಅಪರಾಧ ವಾಗುತ್ತಿತ್ತು. ಇದನ್ನು ಇಡೀ ತಂಡ ಒಪ್ಪಿಕೊಂಡಿತ್ತು. ಧೋನಿ ಬೇಗನೇ ಬ್ಯಾಟಿಂಗ್ ಮಾಡಿ ಔಟಾದರೆ ನಮ್ಮ ರನ್ ಚೇಸಿಂಗ್‌ಗೆ ಪೆಟ್ಟುಬೀಳುತ್ತದೆ ಎಂಬ ಭಯ ನಮಗಿತ್ತು’’ ಎಂದು ಶಾಸ್ತ್ರಿ ಹೇಳಿದ್ದಾರೆ.

ವಿಶ್ವಕಪ್‌ನುದ್ದಕ್ಕೂ 5ನೇ ಕ್ರಮಾಂಕದಲ್ಲಿ ಆಡಿದ್ದ ಧೋನಿ ಕಿವೀಸ್ ವಿರುದ್ಧ ಪಂದ್ಯದಲ್ಲಿ ಅಚ್ಚರಿಯೆಂಬಂತೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಕ್ರಮವಾಗಿ 5 ಹಾಗೂ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು.

 ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಸೆಮಿ ಫೈನಲ್ ಪಂದ್ಯ ಭಾರೀ ಮಳೆಯಿಂದಾಗಿ ಎರಡು ದಿನಗಳ ಕಾಲ ನಡೆದಿತ್ತು. ಕಿವೀಸ್‌ನ್ನು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 239 ರನ್‌ಗೆ ನಿಯಂತ್ರಿಸಿದ್ದ ಭಾರತ ಫೈನಲ್‌ಗೆ ಪ್ರವೇಶಿಸಲು 240 ರನ್ ಗುರಿ ಪಡೆದಿತ್ತು. ಮ್ಯಾಟ್ ಹೆನ್ರಿ(3-37) ನೇತೃತ್ವದ ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 10 ಓವರ್‌ನೊಳಗೆ 24 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

ರವೀಂದ್ರ ಜಡೇಜ(77) ಹಾಗೂ ಧೋನಿ(50) ಏಳನೇ ವಿಕೆಟ್‌ಗೆ 116 ರನ್ ಜೊತೆಯಾಟ ನಡೆಸಿದ್ದರೂ ಇದು ಭಾರತದ ಗೆಲುವಿಗೆ ಸಾಕಾಗಲಿಲ್ಲ. ಅಂತಿಮವಾಗಿ ಭಾರತ 18 ರನ್‌ನಿಂದ ಸೋತು ಸತತ 2ನೇ ವಿಶ್ವಕಪ್‌ನಲ್ಲಿ ಫೈನಲ್ ತಲುಪಲು ವಿಫಲವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News