ಜು.17: ಮಂಗಳೂರು ಹಜ್ ವಿಮಾನ ಯಾತ್ರೆಗೆ ಚಾಲನೆ
ಮಂಗಳೂರು, ಜು.13: ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ 2019ನೇ ಸಾಲಿನಲ್ಲಿ ಹೊರಡುವ ಹಜ್ಜಾಜ್‌ಗಳ ವಿಮಾನ ಯಾತ್ರೆಗೆ ಜು.17ರ ಬೆಳಗ್ಗೆ 10:30ಕ್ಕೆ ಬಜ್ಪೆಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ಜರಗುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು ಎಂದು ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಗೈಯುವರು. ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ಹಾಗೂ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ ಆಶೀರ್ವಚನ ನೀಡುವರು. ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಬಿ. ಝಡ್. ಝಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪ್ರಥಮ ಹಜ್ ಯಾತ್ರಾರ್ಥಿಗಳ ಪಾಸ್‌ಪೋರ್ಟ್ ವಿತರಿಸುವರು. ರಾಜ್ಯ ಹಜ್ ಸಮಿತಿಯ ಅಧ್ಯಕ್ಷ ಆರ್. ರೋಶನ್ ಬೇಗ್ ಪ್ರಥಮ ತಂಡದ ಹಜ್ ವಾಹನಕ್ಕೆ ಹಸಿರು ನಿಶಾನೆ ಪ್ರದರ್ಶಿಸುವರು. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸುವರು. ರಾಜ್ಯ ಹಜ್ ಸಮಿತಿಯ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಪ್ರಾಸ್ತಾವಿಕ ಭಾಷಣ ಮಾಡುವರು ಎಂದರು.
ಮುಖ್ಯ ಅತಿಥಿಗಳಾಗಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿ.ಎಂ. ಫಾರೂಕ್, ಹರೀಶ್ ಕುಮಾರ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಿ.ಎ.ಬಾವಾ, ಯೆನೆಪೊಯ ವಿವಿಯ ಕುಲಾಧಿಪತಿ ವೈ. ಅಬ್ದುಲ್ಲ ಕುಂಞಿ, ಮಾಜಿ ಶಾಸಕರಾದ ಬಿ.ಎ. ಮೊಯ್ದಿನ್ ಬಾವಾ ಹಾಗೂ ಕೆ.ಎಸ್. ಮುಹಮ್ಮದ್ ಮಸೂದ್, ರಾಜ್ಯ ಹಜ್ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹೀಂ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು, ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್, ರಾಜ್ಯ ಹಜ್ ಸಮಿತಿಯ ಇಒ ಸರ್ಫ್ರಾಝ್ ಖಾನ್ ಸರ್ದಾರ್, ಬಜ್ಪೆಅನ್ಸಾರ್ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷ ಬಿ.ಎಂ. ಝಕರಿಯಾ ಭಾಗವಹಿಸುವರು.
ದ.ಕ. ಮತ್ತು ಸುತ್ತಮುತ್ತಲ ಜಿಲ್ಲೆಯ ಹಜ್ ಯಾತ್ರಿಕರು ಈ ಹಿಂದೆ ಬೆಂಗಳೂರನ್ನು ಆಶ್ರಯಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನೇತಾರರು ಮಂಗಳೂರಿನಿಂದ ಪ್ರಯಾಣಕ್ಕೆ ಅನುವು ಮಾಡಿಕೊಡುವಂತೆ ಅಂದಿನ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ಪರಿಣಾಮ 2009 ಅಕ್ಟೋಬರ್ 25ರಂದು ಮಂಗಳೂರು ಹಜ್ ಕೇಂದ್ರ ಅಸ್ತಿತ್ವಕ್ಕೆ ಬಂದು ಉದ್ಘಾಟನೆಗೊಂಡಿತು. ಜೊತೆಗೆ ಮಂಗಳೂರು ಹಜ್ ನಿರ್ವಹಣಾ ಸಮಿತಿಯು ವೈ. ಮುಹಮ್ಮದ್ ಕುಂಞಿಯ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂತು. ಪ್ರಸ್ತುತ ವರ್ಷದ ಹಜ್ ಕ್ಯಾಂಪ್ ಹತ್ತನೇ ವರ್ಷದ್ದಾಗಿದ್ದು ಕಳೆದ 9 ವರ್ಷಗಳಲ್ಲಿ ಯಶಸ್ವಿಯಾಗಿ ಹಜ್‌ಕ್ಯಾಂಪ್ ನಡೆದಿದೆ. ಸುಮಾರು 6 ಸಾವಿರ ಮಂದಿ ಹಜ್‌ಯಾತ್ರೆ ಕೈಗೊಂಡಿದ್ದಾರೆ.
ಪ್ರಸಕ್ತ ವರ್ಷ ದ.ಕ., ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯ 750 ಹಜ್ ಯಾತ್ರಾರ್ಥಿಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮದೀನಾ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ. ಹಜ್ಜಾಜ್‌ಗಳಿಗೆ ಬೇಕಾದ ವರದಿ, ಲಗ್ಗೇಜ್ ಚೆಕ್ ಇನ್, ಪಾಸ್‌ಪೋರ್ಟ್ ಹಾಗೂ ಟಿಕೆಟ್, ಟ್ಯಾಗ್ ವಿತರಣೆ, ಎಮಿಗ್ರೇಶನ್ ಪೂರ್ವ ಸಿದ್ಧತೆ, ದೂರದ ಊರಿನವರಿಗೆ ವಸತಿ, ಊಟೋಪಚಾರದ ವ್ಯವಸ್ಥೆ ಎಲ್ಲವನ್ನೂ ಹಜ್ ಕ್ಯಾಂಪ್ ಮೂಲಕ ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ವ್ಯವಸ್ಥೆ ಮಾಡಲಾಗುವುದು.
ಜು.17,18,19 ಐದು ವಿಮಾನ ಯಾನದ ಮೂಲಕ ಯಾತ್ರೆ ಹೊರಡಲಿದ್ದಾರೆ. ಮಕ್ಕಾ ಮತ್ತು ಮದೀನಾ ಯಾತ್ರೆ ಮುಗಿಸಿ ಹಾಜಿಗಳು ಆ.31ರಿಂದ ಸೆ. 2ರ ತನಕ 5 ತಂಡಗಳಾಗಿ ಜಿದ್ದಾ ವಿಮಾನ ನಿಲ್ದಾಣದ ಮೂಲಕ ಹಂತ ಹಂತವಾಗಿ ಮಂಗಳೂರಿಗೆ ಹಿಂದಿರುಗಲಿರುವರು.
ಜು.15ರಂದು ನೋಂದಣಿ ಆರಂಭ
ಜು.15ರಂದು ಬೆಳಗ್ಗೆ 9:30ಕ್ಕೆ ಹಜ್ಜಾಜ್‌ಗಳ ನೋಂದಣಿ ಪ್ರಕ್ರಿಯೆಯು ಬಜ್ಪೆ ಅನ್ಸಾರ್ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಆರಂಭಗೊಳ್ಳಲಿದೆ. ಜು.17ರಂದು ಯಾತ್ರೆ ಹೊರಡುವವರು ಜು.15ರಂದು, ಜು.18ರಂದು ಹೊರಡುವವರು ಜು.16ರಂದು, ಜು.19ರಂದು ಹೊರಡುವವರು ಜು.17ರಂದು ನೋಂದಣಿ ಸಹಿತ ಉಳಿದ ಪ್ರಕ್ರಿಯೆ ನಡೆಸಬೇಕಾಗಿದೆ.
ರಾಜ್ಯದಿಂದ 8 ಸಾವಿರ ಹಜ್ ಯಾತ್ರಿಕರು
ಕರ್ನಾಟಕ ರಾಜ್ಯದಿಂದ ಸುಮಾರು ಎಂಟು ಸಾವಿರ ಯಾತ್ರಿಕರು ಸರಕಾರದ ಹಜ್ ಸಮಿತಿ ಮೂಲಕ 2019ನೇ ಸಾಲಿನ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಈ ವರ್ಷ ಭಾರತದಿಂದ 2 ಲಕ್ಷ ಯಾತ್ರಿಕರಿಗೆ ಸೌದಿ ಸರಕಾರ ವೀಸಾ ವ್ಯವಸ್ಥೆ ಕಲ್ಪಿಸಿದೆ. ಅದರಲ್ಲಿ 1.40 ಲಕ್ಷ ಮಂದಿ ಸರಕಾರದ ಮೂಲಕ ಹಾಗೂ ಉಳಿದ 60 ಸಾವಿರ ಮಂದಿ ಖಾಸಗಿ ಸಂಸ್ಥೆ ಮೂಲಕ ಯಾತ್ರೆ ಕೈಗೊಳ್ಳುವರು. ಖಾಸಗಿ ಹೊರತು ಪಡಿಸಿ ಸರಕಾರದ ವತಿಯಿಂದ ರಾಷ್ಟ್ರದ 21 ಎಂಬರ್ಕೇಶನ್ ಪಾಯಿಂಟ್ (ವಿಮಾನ ಯಾನ ಕೇಂದ್ರಗಳು) ಮೂಲಕ 500 ವಿಮಾನಗಳು ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಈಗಾಗಲೇ ಭಾರತದ ಬಹುತೇಕ ಯಾತ್ರಿಕರು ಪವಿತ್ರ ಮಕ್ಕಾ ಮತ್ತು ಮದೀನಾಕ್ಕೆ ತಲುಪಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಯೆನೆಪೊಯ ಮುಹಮ್ಮದ್ ಕುಂಞಿ, ಉಪಾಧ್ಯಕ್ಷರಾದ ಸಿ. ಮಹಮೂದ್ ಹಾಜಿ ಮತ್ತು ಎಸ್ಸೆಂ ರಶೀದ್ ಹಾಜಿ, ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ, ಜತೆ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಮಾಧ್ಯಮ ಜೊತೆ ಕಾರ್ಯದರ್ಶಿಗಳಾದ ಅಹ್ಮದ್ ಬಾವಾ ಪಡೀಲ್, ಸುಹೈಲ್ ಕಂದಕ್, ನಾಸಿರ್ ಲಕ್ಕಿಸ್ಟಾರ್ ಉಪಸ್ಥಿತರಿದ್ದರು.