ಟ್ರಂಪ್ ಗೆ ಸೆಡ್ಡುಹೊಡೆದ ವಿಶ್ವಕಪ್ ಗೆದ್ದ ಅಮೆರಿಕ ಫುಟ್ಬಾಲ್ ತಂಡದ ನಾಯಕಿ ಮೇಗನ್

Update: 2019-07-13 12:59 GMT

ವಾಷಿಂಗ್ಟನ್, ಜು.13: ಅಮೆರಿಕಾದ ಮಹಿಳಾ ಫುಟ್ಬಾಲ್ ತಂಡ ದಾಖಲೆಯ ನಾಲ್ಕನೇ ಬಾರಿ ವಿಶ್ವಕಪ್ ಗೆದ್ದಿದೆ. ಇದಾದ ನಂತರದಲ್ಲಿ ತಂಡದ ಸಹ ನಾಯಕಿ ಮತ್ತು ಗೆಲುವಿನ ರೂವಾರಿ ಮೇಗನ್ ರ್ಯಾಪಿನೋ ಅವರು ಶ್ವೇತ ಭವನ ಭೇಟಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಿರುಗೇಟು ನೀಡಿದ್ದಾರೆ.

“ನೀವು ಜನರನ್ನು ಹೊರಗಿಟ್ಟು ಸಂದೇಶ ನೀಡಿದ್ದೀರಿ. ನೀವು ನನ್ನನ್ನು, ನನ್ನಂತೆ ಕಾಣುವವರನ್ನು ಹಾಗೂ ನನ್ನನ್ನು ಬೆಂಬಲಿಸುವ ಅಮೆರಿಕನ್ನರನ್ನು ಕೈಬಿಟ್ಟಿದ್ದೀರಿ'' ಎಂದು ರ್ಯಾಪಿನೊ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿನ್ನೆಲೆ ಏನು?

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ವಿಚಾರದಲ್ಲಿ ಹಾಗೂ ಜನಾಂಗೀಯ ಹಾಗೂ ಲಿಂಗ ಸಮಾನತೆ ಕುರಿತಂತೆ ತಮ್ಮ ನೇರಾನೇರ ಮಾತುಗಳಿಗೆ ಹೆಸರಾಗಿರುವ ರ್ಯಾಪಿನೋ ಅವರು ರವಿವಾರ ತಮ್ಮ ತಂಡ ವಿಶ್ವ ಕಪ್ ಗೆದ್ದ ಬೆನ್ನಲ್ಲೇ ಪ್ರತಿಕ್ರಿಯಿಸಿ ಮಹಿಳಾ ಮತ್ತು ಪುರುಷ ತಂಡಗಳಿಗೆ ಸಮಾನ ವೇತನ ದೊರೆಯಬೇಕೆಂದು ಆಗ್ರಹಿಸಿದರು.

ತಮ್ಮ ತಂಡ ವಿಶ್ವಕಪ್ ಗೆದ್ದರೂ ಶ್ವೇತ ಭವನಕ್ಕೆ ಭೇಟಿ ನೀಡುವುದಿಲ್ಲ ಎಂದು ರ್ಯಾಪಿನೋ ಈ ಹಿಂದೆಯೇ ಹೇಳಿದ್ದು, ಟ್ರಂಪ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.

“ದೇಶವನ್ನು ಅಗೌರವಿಸಬೇಡಿ, ಎಲ್ಲಾ ತಂಡಗಳೂ ಶ್ವೇತಭವನಕ್ಕೆ ಬರುತ್ತವೆ. ಆದರೆ ರ್ಯಾಪಿನೋ ಅವರು ಮೊದಲು ಗೆಲ್ಲಬೇಕು ನಂತರ ಮಾತನಾಡಬೇಕು'' ಎಂದು ಟ್ರಂಪ್ ಒಮ್ಮೆ ಟ್ವೀಟ್ ಮಾಡಿದ್ದರೆ, ಇನ್ನೊಂದು ಟ್ವೀಟ್ ನಲ್ಲಿ “ಈಗ ನಾನು ತಂಡ ಗೆದ್ದರೂ ಸೋತರೂ ಆಹ್ವಾನಿಸುತ್ತಿದ್ದೇನೆ. ದೇಶ ಹಾಗೂ ಧ್ವಜಕ್ಕೆ ಅಗೌರವ ತೋರಿಸಬಾರದು'' ಎಂದಿದ್ದರು.

ಆದರೆ ರವಿವಾರ ತಂಡ ಗೆದ್ದ ಕೂಡಲೇ ತಮ್ಮ ಹಿಂದಿನ ಟ್ವೀಟ್ ನಿಂದ ಹಿಂದೆ ಸರಿದ ಟ್ರಂಪ್ ``ಈ ಬಗ್ಗೆ ಯೋಚಿಸಿಲ್ಲ, ಅದರ ಬಗ್ಗೆ ಪರಿಶೀಲಿಸುತ್ತೇವೆ'' ಎಂದಿದ್ದರು.

ತಮ್ಮ ತಂಡಕ್ಕೆ ಇಲ್ಲಿಯ ತನಕ ಶ್ವೇತ ಭವನಕ್ಕೆ ಭೇಟಿ ನೀಡಲು ಆಹ್ವಾನ ಬಂದಿಲ್ಲ ಎಂದ ರ್ಯಾಪಿನೊ, ಆಹ್ವಾನ ದೊರೆತರೂ ಅದನ್ನು ತಿರಸ್ಕರಿಸುವುದಾಗಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News