ನ್ಯಾಯಾಲಯ ಆವರಣದ ರಕ್ತಕಲೆ ಪ್ರಕರಣ: ಲಭ್ಯವಾಗದ ಸಾಕ್ಷಾಧಾರ; ಮುಂದುವರಿದ ತನಿಖೆ
ಮಂಗಳೂರು, ಜು.13: ದ.ಕ. ಜಿಲ್ಲಾ ನ್ಯಾಯಾಲಯದ ಆವರಣದ ಕಾರುಗಳ ಪಾರ್ಕಿಂಗ್ ಜಾಗದಲ್ಲಿ ಶುಕ್ರವಾರ ಮಧ್ಯಾಹ್ನ ರಕ್ತದ ಕಲೆ ಕಂಡು ಬಂದ ಪ್ರಕರಣ ಇನ್ನೂ ನಿಗೂಢವಾಗಿದ್ದು, ಇದಕ್ಕೆ ಸಂಬಂಧಿಸಿ ಪೊಲೀಸರಿಗೆ ಯಾವುದೇ ಸಾಕ್ಷಾಧಾರ ಸಿಕ್ಕಿಲ್ಲ. ನಾನಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಕಸ ಗುಡಿಸುವವರು ನೋಡುವಾಗ ಸ್ಕಾರ್ಪಿಯೋ ಕಾರಿನ ಡೋರ್ ಹಾಗೂ ಪಕ್ಕದಲ್ಲಿ ರಕ್ತ ಚೆಲ್ಲಿರುವುದನ್ನು ಗಮನಿಸಿದ್ದಾರೆ. ಕೂಡಲೇ ಮಂಗಳೂರು ಉತ್ತರ (ಬಂದರ್) ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆಸ್ಪತ್ರೆ, ಸಿಸಿಕ್ಯಾಮೆರಾ ಪರಿಶೀಲನೆ: ರಕ್ತದ ಚೆಲ್ಲಿದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅಧಿಕಾರಿಗಳ ಬಳಿ ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಗಾಯಾಳುಗಳು ದಾಖಲಾಗಿದ್ದಾರೆಯೇ ಎಂದು ಪರಿಶೀಲನೆಗೆ ಸೂಚನೆ ನೀಡಿದ್ದು, ಈ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಕೋರ್ಟ್‌ನಲ್ಲಿ ಅಳವಡಿಸಿದ ಸಿಸಿಕ್ಯಾಮೆರಾದ ಶೋಧವನ್ನೂ ನಡೆಸಲಾಗಿದ್ದು, ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜು.14ಕ್ಕೆ ಎಫ್‌ಎಸ್‌ಎಲ್ ವರದಿ
ಘಟನೆ ವರದಿಯಾಗುತ್ತಿದ್ದಂತೆ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ರಕ್ತದ ಕಲೆಗಳ ಮಾದರಿ ಸಂಗ್ರಹಿಸಿ ಕೊಂಡೊಯ್ದಿದ್ದಾರೆ. ಜು.14ರಂದು ವರದಿ ಬರುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ಇದು ಮಾನವ ರಕ್ತದ ಕಲೆಗಳೆಂದು ತಿಳಿದು ಬಂದಿದ್ದರೂ, ವರದಿಯಿಂದ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.