×
Ad

ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆಯಿಂದ ಭಾಷೆ ಬಲಿಷ್ಠ: ಸುರೇಂದ್ರ ಅಡಿಗ

Update: 2019-07-13 20:27 IST

ಉಡುಪಿ, ಜು.13: ಇಂದಿನ ಕಾಲಘಟ್ಟದಲ್ಲಿ ಕಂಪ್ಯೂಟರ್ ಅತ್ಯಂತ ಅನಿ ವಾರ್ಯವಾಗಿದ್ದು, ಕನ್ನಡ ಭಾಷೆಯನ್ನು ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡ ಬೇಕಾದರೆ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಅತೀ ಅಗತ್ಯವಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಆಂತರಿಕ ಗುಣಮಟ್ಟ ಖಾತ್ರಿ ಘಟಕ ಮತ್ತು ಕನ್ನಡ ವಿಭಾಗದ ಆಶ್ರಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗಾಗಿ ಶನಿವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಮಂಗಳೂರು ವಿವಿ ಮಟ್ಟದ ‘ಗಣಕಯಂತ್ರದಲ್ಲಿ ಕನ್ನಡ ಬಳಕೆಯ ಸಾಧ್ಯತೆಗಳು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇಂದಿನ ಹಲವಾರು ಸವಾಲುಗಳನ್ನು ಎದುರಿಸಲು ಕಂಪ್ಯೂಟರ್ ಜ್ಞಾನ ಅತೀ ಅಗತ್ಯವಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ ಸುತ್ತೋಲೆ ಯಂತೆ ಇಂದು ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿದೆ ಎಂದು ಅವರು ತಿಳಿಸಿದರು.

ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಕನ್ನಡ ಅಳವಡಿಕೆಯಾದರೆೆ ನನ್ನ ದೇಹವನ್ನು ವೈದ್ಯಕೀಯ ಶಿಕ್ಷಣಕ್ಕಾಗಿ ದಾನ ಮಾಡಲಾಗುವುದು ಎಂದು ಘೋಷಿಸಿದ ಅವರು, ಸೃಜನಶೀಲ, ಬುದ್ದಿವಂತ ಹಾಗೂ ಹೃದಯವಂತ ಶಿಕ್ಷಕರ ಅಗತ್ಯ ಇಂದಿ ಶಿಕ್ಷಣ ವ್ಯವಸ್ಥೆಗೆ ಇದೆ ಎಂದರು.

ಪಿಪಿಸಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಗೌರವ ಕೋಶಾಧಿಕಾರಿ ಪ್ರದೀಪ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ವಹಿಸಿ ದ್ದರು. ಉಪಪ್ರಾಂಶುಪಾಲ ಡಾ.ಪ್ರಕಾಶ್ ರಾವ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ರಾವ್ ಸಿದ್ಧಾಪುರ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ವಂದಿಸಿದರು. ಮಂಜುನಾಥ ಕರಬ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News