×
Ad

ಶಿಕ್ಷಕರಿಂದ ಕೆಟ್ಟ ಚಟ ಮುಕ್ತ ಸಮಾಜ ನಿರ್ಮಾಣ ಸಾಧ್ಯ: ಕೊರ್ಲಪಾಟಿ

Update: 2019-07-13 20:40 IST

ಉಡುಪಿ, ಜು.13: ಕೆಟ್ಟ ಚಟಗಳಿಂದ ವಿದ್ಯಾರ್ಥಿಗಳು ದೂರ ಉಳಿಯು ವಂತೆ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕ ಸಮುದಾಯವು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದರಿಂದ ಈ ಕಾರ್ಯವನ್ನು ನಿಷ್ಠೆ ಯಿಂದ ಮಾಡುವ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಶನಿವಾರ ಜಿಲ್ಲಾ ಪೊಲೀಸ್ ಕಚೇರಿ ಯಲ್ಲಿ ಆಯೋಜಿಸಲಾದ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ತಮ್ಮ ಪರಿಸರದಲ್ಲಿ ನಡೆಯುವ ಮಾದಕ ದ್ರವ್ಯ ಸೇವನೆಯಂತಹ ಕಾನೂನು ವಿರೋಧಿ ಚಟುವಟಿಕೆಗಳ ಬಗ್ಗೆ ಸೆನ್ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಮೂಲಕ ಇಂತಹ ಚಟಗಳಿಗೆ ಮುಂದಿನ ಪೀಳಿಗೆ ಬಲಿಯಾಗದಂತೆ ತಡೆಯಬಹುದಾಗಿದೆ. ಶಿಕ್ಷಕರು ಸಾಮಾಜಿಕ ಜವಾಬ್ದಾರಿಯನ್ನು ವಹಿಸಿ ಕೊಂಡು ಇಂತಹ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮನೋರೋಗ ತಜ್ಞ ಡಾ.ಪಿ.ವಿ. ಭಂಡಾರಿ ಮಾತನಾಡಿ, ಭಾರತದಲ್ಲಿ 16ಕೋಟಿ ಮಂದಿ ಮದ್ಯ ಸೇವನೆ ಮಾಡುತ್ತಿದ್ದು, ಶೇ.30ರಷ್ಟು ಮಂದಿ ಮಾನಸಿಕ ಸಮಸ್ಯೆಯಿಂದಾಗಿ ಈ ಚಟಕ್ಕೆ ಒಳಗಾಗುತ್ತಿದ್ದಾರೆ. ಮದ್ಯ ಸೇವನೆಯಿಂದ ಒತ್ತಡ ಹೆಚ್ಚಾಗುತ್ತದೆಯೇ ಹೊರತು ಕಡಿಮೆ ಆಗಲು ಸಾಧ್ಯವೇ ಇಲ್ಲ. ಮಾದಕ ದ್ರವ್ಯಗಳ ಕುರಿತು ಯುವಜನತೆ ಯಲ್ಲಿ ಈ ರೀತಿಯ ಹಲವು ತಪ್ಪು ಕಲ್ಪನೆಗಳಿವೆ ಎಂದರು.

ಮಾದಕ ದ್ರವ್ಯ ಸೇವನೆಯ ಚಟ ದೈಹಿಕ ಹಾಗೂ ಮಾನಸಿಕ ರೋಗವೇ ಹೊರತು ಯಾವುದೇ ಕ್ರಿಮಿನಲ್ ಅಪರಾಧ ಅಲ್ಲ. ಇದೊಂದು ವೈದ್ಯಕೀಯ ಸಮಸ್ಯೆಯಾಗಿರುವುದರಿಂದ ಇದನ್ನು ಚಿಕಿತ್ಸೆಯ ಮೂಲಕ ಪರಿಹರಿಸಲು ಸಾಧ್ಯ. ಮದ್ಯ ಸೇವನೆ ಚಟದಿಂದ ಶೇ.20-30, ತಂಬಾಕು ಸೇವನೆಯಿಂದ ಶೇ.8-10 ಮತ್ತು ಗಾಂಜಾ ಸೇವನೆ ಚಟದಿಂದ ಶೇ.3-5ರಷ್ಟು ಮಂದಿ ಹೊರಗೆ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮಾತನಾಡಿ, ಮಾದಕ ದ್ರವ್ಯ ಎಂಬುದು ಈಗ ಇಡೀ ಜಗತ್ತಿನ ಸಮಸ್ಯೆಯಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿವೆ. ವಿಶ್ವಸಂಸ್ಥೆಯ ಏಜೆನ್ಸಿ, ಭಾರತದಲ್ಲಿ ನಾರ್ಕೊಟಿಕ್ ಕಂಟ್ರೋಲ್ ಬ್ಯೂರೋ ಮತ್ತು ಕರ್ನಾಟಕದಲ್ಲಿ ಸಿಐಡಿಯಲ್ಲಿ ಪ್ರತ್ಯೇಕ ವಿಭಾಗ ಮತ್ತು ಪ್ರತಿ ಜಿಲ್ಲೆಯಲ್ಲೂ ಸೆನ್ ಅಪರಾಧ ಪೊಲೀಸ್ ಠಾಣೆಯನ್ನು ಸ್ಥಾಪಿಸಿ ಇದರ ವಿರುದ್ಧ ಕಾರ್ಯಾ ಚರಣೆ ನಡೆಸಲಾಗುತ್ತಿದೆ ಎಂದರು.

ಎಲ್ಲ ಹಂತದಲ್ಲೂ ಮಾದಕ ದ್ರವ್ಯ ದಂಧೆಯನ್ನು ತಡೆಯುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅದಕ್ಕೆ ಬಿಗಿಯಾದ ಕಾನೂನು ಕೂಡ ರೂಪಿಸಲಾಗಿದೆ. ಈ ಅಪರಾಧ ಎಸಗಿದವರಿಗೆ 20ವರ್ಷ ಕಾಲ ಜೈಲು ಶಿಕ್ಷೆ ಮತ್ತು ಮರಣದಂಡನೆ ವಿಧಿಸಲು ಕೂಡ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಆದರೆ ಕೇವಲ ಕಾನೂನಿನಡಿಯಲ್ಲಿ ಕಾರ್ಯಾಚರಣೆ ನಡೆಸಿದರೆ ಈ ಸಮಸ್ಯೆಯನ್ನು ನಿರ್ಮೂ ಲನೆ ಮಾಡಲು ಸಾಧ್ಯವಿಲ್ಲ. ಮಾದಕ ವಸ್ತುಗಳಿಗೆ ಇರುವ ಬೇಡಿಕೆಯನ್ನು ಕಡಿಮೆ ಮಾಡಲು ಹೆಚ್ಚಿನ ಒತ್ತು ನೀಡಬೇಕಾಗಿದೆ. ಇದರಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಸ್ವಾಗತಿಸಿದರು. ಡಿವೈಎಸ್ಪಿ ಜೈಶಂಕರ್ ವಂದಿಸಿದರು. ಶಿವಾನಂದ ನಾರಿ ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News