ವೀಸಾ ಏಜೆಂಟ್ ನಿಂದ ಮೋಸ: ಮಂಗಳೂರು ತಲುಪಿ ಕಂಗಾಲಾದ ಹೈದರಾಬಾದ್ ಮಹಿಳೆಗೆ ನೆರವಾದ ಕಾರು ಚಾಲಕ ಅಶ್ರಫ್

Update: 2019-07-13 15:22 GMT

ಬಂಟ್ವಾಳ, ಜು.13: ಕಾರಣಾಂತರಗಳಿಂದ ವಿದೇಶದಿಂದ ವಾಪಸಾಗಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂದಿಳಿದು ಹಣವಿಲ್ಲದೆ ಅತಂತ್ರರಾಗಿದ್ದ ಹೈದರಾಬಾದ್ ಮೂಲದ ಮಹಿಳೆಯೊಬ್ಬರಿಗೆ ನೆರವು ನೀಡಿ, ಉಪಚರಿಸಿ ತಾಯ್ನಾಡಿಗೆ ಕಳುಹಿಸುವ ಮೂಲಕ ಕಲ್ಲಡ್ಕ ನಿವಾಸಿ ಮುಹಮ್ಮದ್ ಅಶ್ರಫ್ ಮಾನವೀಯತೆ ಮೆರೆದಿದ್ದಾರೆ.

ಅಶ್ರಫ್ ಅವರು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಓಲಾ ಕಂಪೆನಿಯ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಜೂ. 12ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಹೈದರಾಬಾದ್ ಮೂಲದ ಮಹಿಳೆ ಕಂಗಾಲಾಗಿದ್ದರು.

“ಜೂ. 12ರಂದು ಬೆಳಗ್ಗೆ 9:30 ಸುಮಾರಿಗೆ ಅಂದಾಜು 45 ವರ್ಷದ ಮಹಿಳೆಯೊಬ್ಬರು ನನ್ನ ಬಳಿ ಬಂದು ಸಹಾಯ ಯಾಚಿಸಿದ್ದರು. ಹೈದರಾಬಾದ್ ತನ್ನೂರಾಗಿದ್ದು, ತನ್ನ ಹೆಸರು ಕುಮಾರಿ ಎಂದವರು ಹೇಳಿದ್ದರು. ತಾನು ಕುವೈತ್ ಗೆ ಮನೆಕೆಲಸಕ್ಕೆಂದು ತೆರಳಿದ್ದು, ಏಜೆಂಟ್‍ ನಿಂದ ವೀಸಾ ಸಿಗದೆ ವಂಚನೆಗೊಳಗಾಗಿ ಇಲ್ಲಿಗೆ ಬಂದಿಳಿದಿದ್ದೇನೆ. ಘಟನೆಯ ಬಗ್ಗೆ ಏಜೆನ್ಸಿಗೆ ಕರೆ ಮಾಡಿ ತಿಳಿಸಿದಾಗ ಸ್ಪಂದಿಸುತ್ತಿಲ್ಲ. ಅದಲ್ಲದೆ, ಕರೆಯನ್ನು ನಿರಾಕರಿಸುತ್ತಿದ್ದಾರೆ. ತನ್ನೂರಿಗೆ ಹೋಗಬೇಕೆಂದರೆ ಹಣವಿಲ್ಲ ಎಂದು ಮಹಿಳೆಯು ತಮ್ಮ ಅಳಲನ್ನು ತೋಡಿಕೊಂಡರು" ಎಂದು ಅಶ್ರಫ್ ಅವರು "ವಾರ್ತಾ ಭಾರತಿ"ಗೆ ತಿಳಿಸಿದ್ದಾರೆ.

"ವಿಮಾನದಲ್ಲಿ ಕಳುಹಿಸುವಷ್ಟು ಶಕ್ತನಲ್ಲ. ಆದ್ದರಿಂದ ಮಹಿಳೆಗೆ ಬೆಳಗಿನ ಉಪಹಾರ ಕೊಡಿಸಿ ಮಂಗಳೂರಿನ ರೈಲು ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದೇನೆ. ಹೈದರಾಬಾದ್‍ ಗೆಂದು ನೇರ ರೈಲು ಮಾರ್ಗವಿಲ್ಲದ ಹಿನ್ನೆಲೆಯಲ್ಲಿ ಮಧ್ಯಾಹ್ನ ಮಂಗಳೂರಿನಿಂದ ತಮಿಳುನಾಡಿಗೆ ಹೊರಡುವ ರೈಲಿಗೆ ಟಿಕೆಟು ತೆಗೆದು ಅಲ್ಲಿಂದ ಹೈದರಾಬಾದ್ ತೆರಳುವಂತೆ ಮಾಹಿತಿ ನೀಡಿದ್ದೇನೆ. ಖರ್ಚಿಗಾಗಿ 1,250 ರೂ. ವನ್ನು ಮಹಿಳೆಗೆ ನೀಡಿರುವುದಾಗಿ ಘಟನೆಯ ಬಗ್ಗೆ ಅಶ್ರಫ್ ಅವರು ಮಾಹಿತಿ ನೀಡಿದ್ದಾರೆ.

ವ್ಯಾಪಕ ಪ್ರಶಂಸೆ:

ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಪರವೂರಿನಿಂದ ಬಂದವರಿಂದ ರಿಕ್ಷಾ, ಟ್ಯಾಕ್ಸಿ ಚಾಲಕರು ದುಬಾರಿ ಹಣ ಪಡೆದು ಮೋಸ ಮಾಡುತ್ತಾರೆ ಎನ್ನುವ ಆರೋಪಗಳಿವೆ. ಇಂತಹವರ ನಡುವೆ ಮಹಿಳೆಗೆ ನೆರವಾಗಿ, ತನ್ನಲ್ಲಿದ್ದ ಹಣವನ್ನೂ ನೀಡಿದ ಅಶ್ರಫ್ ಅವರ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News