ಸ್ವದೇಶಕ್ಕೆ ಆಗಮಿಸಲು ಇಬ್ಬರು ಸಂತ್ರಸ್ತರ ಸಿದ್ಧತೆ: ಜು.14ರಂದು ಮುಂಬೈಗೆ ಆಗಮನ
ಮಂಗಳೂರು : ಉದ್ಯೋಗಕ್ಕೆಂದು ಕುವೈತ್‌ಗೆ ತೆರಳಿ ಅತಂತ್ರ ಸ್ಥಿತಿಯಲ್ಲಿದ್ದ 34 ಮಂದಿ ಕರಾವಳಿಯ ಸಂತ್ರಸ್ತ ನೌಕರರ ಪೈಕಿ ಇಬ್ಬರು ಸ್ವದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದು, ಜು.14ರ ಬೆಳಗ್ಗೆ 3 ಗಂಟೆಗೆ ಮುಂಬೈ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ.
ಕುವೈತ್‌ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ಅನಿವಾಸಿ ಉದ್ಯಮಿಗಳು ಕಂಪೆನಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಪರಿಣಾಮವಾಗಿ ಇಬ್ಬರು ಸಂತ್ರಸ್ತರು ಭಾರತಕ್ಕೆ ಮರಳುವುದು ಸಾಧ್ಯವಾಯಿತು. ಇನ್ನು ಉಳಿದ ಸಂತ್ರಸ್ತರು ಶೀಘ್ರದಲ್ಲಿಯೇ ವಾಪಸಾಗಲಿದ್ದಾರೆ.
ಕುವೈತ್‌ನಲ್ಲಿ ಸಂಕಷ್ಟಕೀಡಾದವರ ಪೈಕಿ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಕುವೈತ್‌ನ ವಿಮಾನ ನಿಲ್ದಾಣದಿಂದ ಜು.13ರಂದು ರಾತ್ರಿ 8:30ಕ್ಕೆ ಹಾಗೂ ಉತ್ತರ ಪ್ರದೇಶದ ಪಂಕಜ್ ಜು.13ರ ತಡರಾತ್ರಿ 12:30ಕ್ಕೆ ವಿಮಾನ ಪ್ರಯಾಣ ಆರಂಭಿಸಲಿದ್ದಾರೆ. ಇವರು ಮುಂಬೈ ವಿಮಾನ ನಿಲ್ದಾಣಕ್ಕೆ ಜು.14ರ ನಸುಕಿನ ಜಾವ 3 ಗಂಟೆಗೆ ತಲುಪಲಿದ್ದಾರೆ ಎಂದು ಉದ್ಯಮಿ ಮೋಹನ್ ದಾಸ್ ಕಾಮತ್ ತಿಳಿಸಿದ್ದಾರೆ.
ಜು.15ರಂದು ಆಂಧ್ರದ 15 ಮಂದಿ ಹೊರಡಲಿದ್ದಾರೆ. ಅವರ ಟಿಕೆಟ್‌ನ್ನು ಉದ್ಯಮಿ ಆಕಾಶ್ ಪನ್ವಾರ್ ವಹಿಸಿದ್ದಾರೆ. ಜು.17ರಂದು ಮಂಗಳೂರಿನ 19 ಮಂದಿ ಬರಲಿದ್ದು, ಇವರ ಟಿಕೆಟ್‌ನ್ನು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಹಾಗೂ ಇತರ ದಾನಿಗಳು ಭರಿಸಲು ನಿರ್ಧರಿಸಿದ್ದಾರೆ. ಉಳಿದವರ ಸಂತ್ರಸ್ತರ ಪಾಸ್‌ಪೋರ್ಟ್ ಸೋಮವಾರ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಕುವೈತ್‌ನಲ್ಲಿ ಅತಂತ್ರರಾದವರಿಗೆ ಕಂಪೆನಿ ನೀಡಿದ ಬಾಡಿಗೆ ಮನೆಯನ್ನೇ ಮುಂದುವರಿಸಲಾಗಿದೆ. ಇದರಲ್ಲಿ ಜು.17ರವರೆಗೆ ನಿಲ್ಲಲು ಮನೆ ಮಾಲಕರು ಒಪ್ಪಿಗೆ ನೀಡಿದ್ದು, ಇದಕ್ಕಿಂತ ಮೊದಲೇ ಎರಡೆರಡು ಬಾರಿ ಮಾಲಕರು ತೆರವು ಮಾಡಲು ಹೇಳಿದ್ದರೂ ಅನಿವಾಸಿ ಭಾರತೀಯರ ವಿನಂತಿ ಮೇರೆಗೆ ಜು.17ರವರೆಗೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂತ್ರಸ್ತರಿಗೆ ಬೀಳ್ಕೊಡುಗೆ
ಕುವೈತ್‌ನಿಂದ ಜು.13ರ ರಾತ್ರಿ ಭಾರತಕ್ಕೆ ಪ್ರಯಾಣ ಬೆಳೆಸಲಿರುವ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್, ಉತ್ತರಪ್ರದೇಶದ ಪಂಕಜ್ ಅವರಿಗೆ ಕರಾವಳಿ ಮೂಲದ ಹಾಗೂ ಅನಿವಾಸಿ ಭಾರತೀಯ ಉದ್ಯಮಿ ಮೋಹನ್ ದಾಸ್ ಕಾಮತ್, ರಾಜ್ ಭಂಡಾರಿ, ಅಲ್ವೀನ್ ಡಿಸೋಜ, ಅಮಿತಾಶ್ ಪ್ರಭು ಮತ್ತಿತರರು ಬೀಳ್ಕೊಟ್ಟರು.
ದೂತಾವಾಸ ಅಧಿಕಾರಿಯ ಸಹಕಾರ
ಕುವೈತ್‌ನಲ್ಲಿ ವಿವಿಧ ಕಾರಣಕ್ಕೆ ಸಂಕಷ್ಟಕ್ಕೊಳಗಾಗುವ ಸಂತ್ರಸ್ತರಿಗೆ ಕಾನೂನಿನ ನೆಲೆಯಲ್ಲಿ ಸಹಾಯ ಮಾಡಲು ಕುವೈತ್ ದೂತಾವಾಸ ಅಧಿಕಾರಿ ಸಿಬಿ ಯು.ಎಸ್. ತುಂದಿಗಾಲಲ್ಲಿ ನಿಂತಿರುತ್ತಾರೆ. ಅಧಿಕಾರಿಯ ರಜೆಯ ದಿನಗಳಲ್ಲೂ ಸಂತ್ರಸ್ತರ ದೂರು ಆಲಿಸುತ್ತಾರೆ. ದೂತಾವಾಸ ಅಧಿಕಾರಿಗಳಿಗೆ ತಮ್ಮದೇ ಆದ ಪ್ರೊಟೊಕಾಲ್ ಇರುತ್ತದೆ. ಅದರ ಹೊರತಾಗಿಯೂ, ಸಂಪರ್ಕಕ್ಕೆ ಅಧಿಕಾರಿ ಸಿಗುತ್ತಾರೆ. ಇಂತಹ ಮಾದರಿ ಅಧಿಕಾರಿಗಳಿಂದ ಸಂತ್ರಸ್ತರ ಸಂಕಷ್ಟ ಕರಗಲಿದೆ ಎಂದು ಅನಿವಾಸಿ ಭಾರತೀಯ ಉದ್ಯಮಿ ಮೋಹನ್ ದಾಸ್ ಕಾಮತ್ ತಿಳಿಸಿದ್ದಾರೆ.