ಉಡುಪಿ: 42 ಮಕ್ಕಳಿದ್ದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು, ಸಿಬ್ಬಂದಿಯನ್ನು ವರ್ಗಾಯಿಸಿದ ಶಿಕ್ಷಣ ಇಲಾಖೆ
ಉಡುಪಿ, ಜು.13: ಒಟ್ಟು 42 ಮಂದಿ ವಿದ್ಯಾರ್ಥಿಗಳು ಕಲಿಯುತ್ತಿರುವ ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಯ ಎಲ್ಲಾ ಐವರು ಶಿಕ್ಷಕ ವರ್ಗ ಹಾಗೂ ಓರ್ವ ಶಿಕ್ಷಕೇತರ ಸಿಬ್ಬಂದಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವರ್ಗಾಯಿಸಿದ್ದು, ಇದೀಗ ಈ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಗಳ ವಿದ್ಯಾಭ್ಯಾಸ ಡೋಲಾಯಮಾನವಾಗಿದೆ ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಎ. ನರಸಿಂಹ ದೂರಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯಡ್ಕದ ಬೊಮ್ಮರಬೆಟ್ಟು ಗ್ರಾಮದ ತೀರಾ ಕುಗ್ರಾಮವಾಗಿರುವ ಪಂಚನಬೆಟ್ಟಿನಲ್ಲಿ ಪಂಚನಬೆಟ್ಟು ವಿದ್ಯಾವರ್ಧಕ ಸಂಘ 29 ವರ್ಷಗಳ ಹಿಂದೆ ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢ ಶಾಲೆಯನ್ನು ಪ್ರಾರಂಭಿಸಿದ್ದು, ಇದು ಈ ಗ್ರಾಮದ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುವ ಮೂಲಕ ಜ್ಞಾನದ ಬೆಳಕು ಹರಿಸಿತ್ತು ಎಂದು ಅವರು ತಿಳಿಸಿದರು.
ಪಂಚನಬೆಟ್ಟಿನ ವಿದ್ಯಾಭ್ಯಾಸದಿಂದ ವಂಚಿತವಾಗಿದ್ದ ಮಕ್ಕಳಿಗೆ ಈ ಕನ್ನಡ ಶಾಲೆ ಉಚಿತ ಶಿಕ್ಷಣವನ್ನು ನೀಡುತ್ತಿತ್ತು. ಸರಕಾರದ ಯಾವುದೇ ಅನುದಾನವಿಲ್ಲದೇ ಸಂಘ 18 ವರ್ಷಗಳ ಕಾಲ ಈ ಶಾಲೆಯನ್ನು ಯಶಸ್ವಿಯಾಗಿ ನಡೆಸಿತ್ತು. ಆದರೆ ಇದೀಗ ಇಲಾಖೆ, ಆಡಳಿತ ಮಂಡಳಿಗೆ ಯಾವುದೇ ಮಾಹಿತಿಯನ್ನು ನೀಡದೇ ಈ ಪ್ರೌಢ ಶಾಲೆಯ ಎಲ್ಲಾ ಐವರು ಶಿಕ್ಷಕರು ಹಾಗೂ ಓರ್ವ ಶಿಕ್ಷಕೇತರ ಸಿಬ್ಬಂದಿಯನ್ನು ಶುಕ್ರವಾರ ಕೌನ್ಸಿಲಿಂಗ್ ಮೂಲಕ ಏಕಾಏಕಿ ಬೇರೆ ಕಡೆಗೆ ವರ್ಗಾವಣೆಗೊಳಿಸಿದೆ ಎಂದವರು ಹೇಳಿದರು.
ಕೌನ್ಸಿಲಿಂಗ್‌ಗೆ ಬರುವಂತೆ ನೋಟೀಸು ಕಳುಹಿಸಿದ್ದ ಇಲಾಖೆ, ಇವರನ್ನು ಡಿಡಿಪಿಐ ಕಚೇರಿಗೆ ಕರೆಸಿ ತಮ್ಮ ನೌಕರಿಯ ಬೆದರಿಕೆಯನ್ನು ತೋರಿಸಿ ಬೇರೆ ಕಡೆಗೆ ವರ್ಗಾಯಿಸಿದೆ ಎಂದೂ ಎ.ನರಸಿಂಹ ಅವರು ಆರೋಪಿಸಿದರು. ಈ ಮೂಲಕ 42 ಮಂದಿ ಮಕ್ಕಳು ಕಲಿಯುತ್ತಿರುವ ಕನ್ನಡ ಮಾಧ್ಯಮ ಶಾಲೆ ಯೊಂದನ್ನು ಇಲಾಖೆಯೇ ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದವರು ದೂರಿದರು.
ಆಡಳಿತ ಮಂಡಳಿಯ ಮುತುವರ್ಜಿಯಿಂದ ಈ ಬಾರಿ ಎಂಟನೇ ತರಗತಿಗೆ 22 ಮಂದಿ ಸೇರ್ಪಡೆಗೊಂಡಿದ್ದಾರೆ. ತೀರಾ ಹಿಂದುಳಿದ ಕುಗ್ರಾಮದಲ್ಲಿ ಸ್ಥಳೀಯ ಜನರೇ ಸೇರಿ ಸ್ಥಾಪಿಸಿದ ಕನ್ನಡ ಮಾದ್ಯಮ ಪ್ರೌಢಶಾಲೆಯೊಂದನ್ನು ಆಂಗ್ಲ ಮಾಧ್ಯಮ ಶಾಲೆಗಳ ಒತ್ತಡದಿಂದ, ಕನ್ನಡಾಭಿಮಾನವಿಲ್ಲದ ಸರಕಾರ ಮುಚ್ಚಲು ಮುಂದಾಗಿರುವಂತೆ ಕಾಣುತ್ತಿದೆ ಎಂದವರು ಹೇಳಿದರು.
ಆಂಗ್ಲ ಮಾಧ್ಯಮಕ್ಕೆ ದೊರೆಯುತ್ತಿರುವ ಪ್ರಾಶಸ್ತ್ಯದಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದನ್ನು ಗಮನಿಸಿದ ಶಾಲಾ ಆಡಳಿತ, ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ದೂರದ ಮಕ್ಕಳಿಗೆ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ, ಕಳೆದ ನಾಲ್ಕು ವರ್ಷಗಳಲ್ಲಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರುವಂತೆ ಮಾಡುವ ಪ್ರಯತ್ನ ನಡೆಸಿದೆ ಎಂದು ನರಸಿಂಹ ವಿವರಿಸಿದರು.
ಊರಿನ ಶಾಲೆಯೊಂದರ ಮೇಲಿನ ಅಭಿಮಾನದಿಂದ ಸಂಘವು ಕೇವಲ ಸೇವಾಮನೋಭಾವದಿಂದ ದಾನಿಗಳ ನೆರವಿನಿಂದ ವಿವಿಧ ಸೌಲಭ್ಯ ಗಳನ್ನು ಉಚಿತವಾಗಿ ನೀಡುತ್ತಿರುವಾಗಲೇ ಸರಕಾರ ಹೈಸ್ಕೂಲಿನ ಐವರು ಶಿಕ್ಷಕರು ಹಾಗೂ ಓರ್ವ ಸಿಬ್ಬಂದಿಯನ್ನು ಆಡಳಿತ ಮಂಡಳಿಯನ್ನು ಕೇಳದೇ, ಶುಕ್ರವಾರ ಮಣಿಪಾಲಕ್ಕೆ ಕರೆಸಿ ಕೌನ್ಸಿಲಿಂಗ್ ಮೂಲಕ ವರ್ಗಾಯಿಸಿದೆ. ಈಗ ಶಾಲೆಯಲ್ಲಿ ಆಡಳಿತ ಮಂಡಳಿ ನೀಡುವ ಗೌರವಧನ ದಿಂದ ಕಲಿಸುತ್ತಿರುವ ಇಬ್ಬರು ತಾತ್ಕಾಲಿಕ ಶಿಕ್ಷಕರು ಮಾತ್ರ ಉಳಿದುಕೊಂಡಿದ್ದಾರೆ ಎಂದರು.
ಶಾಲೆಯಲ್ಲಿ 2016-17ನೇ ಸಾಲಿನಲ್ಲಿ ಒಟ್ಟು 41 ಮಂದಿ ವಿದ್ಯಾರ್ಥಿಗಳು ಕಲಿಯುತಿದ್ದರೆ, 2017-18ನೇ ಸಾಲಿನಲ್ಲಿ 44 ಹಾಗೂ 2018-19ನೇ ಸಾಲಿನಲ್ಲಿ 39 ವಿದ್ಯಾರ್ಥಿಗಳು ಕಲಿಯುತಿದ್ದರು. ಇವರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದವರು ವಿವರಿಸಿದ್ದಾರೆ.
ಇಲಾಖೆಯ ಈ ಕ್ರಮದಿಂದ ಈ ಬಾರಿ ಎಂಟನೇ ತರಗತಿಗೆ ಸೇರ್ಪಡೆ ಗೊಂಡ 22 ಮಂದಿಯೂ ಸೇರಿದಂತೆ ಈಗ ಶಾಲೆಯ 8,9,10ನೇ ತರಗತಿ ಗಳಲ್ಲಿ ಕಲಿಯುತ್ತಿರುವ ಒಟ್ಟು 42 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ಕಲಿಕೆಗೆ ತೊಂದರೆಯಾಗಿದೆ. ಇದನ್ನು ಆಡಳಿತ ಮಂಡಳಿ ಖಂಡಿಸುತ್ತದೆ. ಈ ಬಗ್ಗೆ ಚರ್ಚಿಸಲು ಆಡಳಿತ ಮಂಡಳಿ, ನಾಳೆ ವಿದ್ಯಾರ್ಥಿಗಳ ಹೆತ್ತವರು ಹಾಗೂ ಗ್ರಾಮಸ್ಥರ ಸಭೆಯೊಂದನ್ನು ಕರೆದಿದ್ದು ಮುಂದಿನ ಕ್ರಮದ ಕುರಿತು ಚರ್ಚಿಸಲಿದೆ ಎಂದರು.
ಸರಕಾರ ಹಾಗೂ ಇಲಾಖೆಯ ಈ ಕ್ರಮವನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ. ಈ ಬಗ್ಗೆ ಎಸಿಬಿಗೂ ದೂರನ್ನು ನೀಡುತ್ತೇವೆ ಎಂದು ಎ.ನರಸಿಂಹ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ ಶೆಟ್ಟಿ, ಅಶೋಕ ಆಚಾರ್ಯ, ಸಂದೇಶ್ ಉಪಸ್ಥಿತರಿದ್ದರು.