ಕೆಸರು ಗದ್ದೆಯಾದ ರಸ್ತೆ: ಗ್ರಾಮಸ್ಥರಿಂದ ಗದ್ದೆನಾಟಿ ಮಾಡಿ ಪ್ರತಿಭಟನೆ

Update: 2019-07-13 17:20 GMT

ಭಟ್ಕಳ: ಕಳೆದ ಹಲವಾರು ವರ್ಷಗಳಿಂದ ಡಾಂಬರು ಕಾಣದೆ ಗದ್ದೆಯಾಗಿ ಮಾರ್ಪಟ್ಟಿರುವ ಶಿರಾಲಿ ಪಂಚಾಯತ್ ವ್ಯಾಪ್ತಿಯ ಚಿತ್ರಾಪುರದ ಬಡ್ಡುಕುಳಿ ರಸ್ತೆಯ ಮೇಲೆ ಭತ್ತನಾಟಿ ಮಾಡುವುದರ ಮೂಲಕ ವಿನೂತನವಾಗಿ ಪ್ರತಿಭಟಿಸಿದ ಘಟನೆ ವರದಿಯಾಗಿದೆ.

ದಲಿತ ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಈ ಭಾಗದಲ್ಲಿ ಶಿವಾನಂದಾ ನಾಯ್ಕರಿಂದ ಇದುವರೆಗೆ ನಾಲ್ಕು ಶಾಸಕರ ಅವಧಿ ಪೂರ್ಣಗೊಳುತ್ತಿದ್ದರೂ ಈ ಭಾಗದ ಜನರು ಮಾತ್ರ ಮೂಲಭೂತ ಸೌಲಭ್ಯದಿಂದ ವಂಚಿತರಾಗಿಯೇ ಉಳಿದುಕೊಂಡಿದ್ದಾರೆ.

ಗೊಂಡ ಸಮುದಾಯ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿರುವ 150ರಿಂದ 200 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಈ ರಸ್ತೆ ಚಿತ್ರಾಪುರ ಅಂಚೆ ಕಚೇರಿಯ ಎದುರಿನಿಂದ ಬಡ್ಡುಕುಳಿ ದೇವಾಲಯದವರೆಗೆ ಇದ್ದು ನಿತ್ಯ ನೂರಾರು ಜನ ಓಡಾಡುತ್ತಾರೆ. ಕಳೆದ 15 ವರ್ಷದಿಂದ ಇಲ್ಲಿನ ಜನರು ಮಳೆಗಾಲದಲ್ಲಿ ಕೆಸರಿನಲ್ಲಿಯೇ ತಿರುಗಾಡುವಂತಾಗಿದೆ. ಈ ಹಿಂದೆ ಇಲ್ಲಿನ ಸ್ಥಳೀಯರೆಲ್ಲರು ಸೇರಿ ಪಂಚಾಯತಗೆ ರಸ್ತೆ ನಿರ್ಮಾಣಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ. ಮನವಿಗೆ ಯಾವುದೇ ಸ್ಪಂದನೆ ಇಲ್ಲವಾದ್ದರಿಂದ ಜನರು ಹೈರಾಣಾಗಿದ್ದಾರೆ. ಜನರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳಿಗೆ ಜನಪ್ರತಿನಿಧಿಗಳಾಗಲಿ, ಪಂಚಾಯತ ಅಧಿಕಾರಿಗಳಾಗಲಿ ಗಮನಹರಿಸಿಲ್ಲವಾಗಿದ್ದು ಸ್ಥಳೀಯರಿಗೆ ರಸ್ತೆ ನಿರ್ಮಾಣದ ಭರವಸೆಯೆ ಇಲ್ಲವಾಗಿದೆ.

ರಸ್ತೆ ನಿರ್ಮಾಣಕ್ಕೆಂದು ಸರ್ಕಾರ ಹಣ ಮಂಜೂರು ಮಾಡಿದ್ದು ಟೆಂಡರ್ ಕರೆಯುವಲ್ಲಿ ಸಂಬಂಧಪಟ್ಟ ಇಲಾಖೆ ಮೀನಾಮೇಷ ಎಣಿಸುತ್ತಿದ್ದು, ಇಲ್ಲಿನ ಜನರ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದೆ ಎಂಬ ಕೂಗು ಕೇಳಿ ಬಂದಿದೆ.

ಈ ರಸ್ತೆಯೂ ಇಲ್ಲಿಗೆ ನಾಲ್ಕು ಶಾಸಕರನ್ನು ಕಂಡಿದ್ದು ಇನ್ನು ತನಕ ರಸ್ತೆಗೆ ಕಾಯಕಲ್ಪ ಮಾತ್ರ ಸಿಕ್ಕಿಲ್ಲವಾಗಿದೆ. ಈ ಭಾಗದ ಜನರು ರಸ್ತೆ ಬೇಕೆಂದು ಮಾಜಿ ಶಾಸಕ ಶಿವಾನಂದ ನಾಯ್ಕ ಅವರ ಅವಧಿಯಲ್ಲಿ ಒತ್ತಾಯಿಸುತ್ತಾ ಬಂದಿದ್ದಾರೆ. ಅವರ ಅವಧಿಯಲ್ಲಿ ಅಲ್ಲಿನ ಕೃಷಿಕರ ಜಮೀನಾಗಿದ್ದ ಸ್ಥಳವನ್ನು ಅಂದಿನ ಶಾಸಕರ ಮನವಿಗೆ ಒಪ್ಪಿ ರಸ್ತೆಗಾಗಿ ಜಾಗ ನೀಡಿ ಶಾಸಕರ ನಿಧಿಯಿಂದ ಮಣ್ಣಿನ ರಸ್ತೆ ನಿರ್ಮಾಣಗೊಂಡಿತ್ತು. ನಂತರ ರಸ್ತೆಗೆ ಒಂದು ರೂಪರೇಷೆ ಸಿಕ್ಕಿದು ಬಳಿಕ ಮಾಜಿ ಶಾಸಕ ಮಂಕಾಳ ವೈದ್ಯ ಅವಧಿಯಲ್ಲಿ ಡಾಂಬರು ಅಥವಾ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಪೂರಕ ಕಾರ್ಯಗಳೆಲ್ಲವೂ ಸಿದ್ದಗೊಂಡಿದ್ದು ಅಷ್ಟರಲ್ಲಿಯೇ ಚುನಾವಣೆ ಬಂದಿದ್ದರಿಂದ ರಸ್ತೆ ನಿರ್ಮಾಣ ಅಲ್ಲಿಗೆ ನಿಂತಿತ್ತು. ಹಾಲಿ ಶಾಸಕ ಸುನೀಲ ನಾಯ್ಕ ಈ ರಸ್ತೆಯ ನಿರ್ಮಾಣಕ್ಕೆ ಅನುಮೋದನೆ ಮಾಡಿಸಿದ್ದು ಇನ್ನು ತನಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ.

ಇದೇ ರಸ್ತೆಯ ಪಕ್ಕದಲ್ಲಿ ಇನ್ನೊಂದು ರಸ್ತೆಯಿದ್ದು ಅದು ಸಹ ಮಳೆಗಾಲದಲ್ಲಿ ನೀರಿನಿಂದ ತುಂಬಿದ್ದು, ಬಡ್ಡುಕುಳಿ ರಸ್ತೆಯೂ ಕೆಸರಿನಂತಾಗಿದೆ. ಜನರಿಗೆ ತಿರುಗಾಡಲು ಸೂಕ್ತ ರಸ್ತೆಯೇ ಇಲ್ಲದಂತಾಗಿದೆ. ಸದ್ಯ ಅನುಮೋದನೆಗೊಂಡ ಈ ರಸ್ತೆಯೂ ಟೆಂಡರ ಹಂತದಲ್ಲಿದ್ದು, ಶೀಘ್ರದಲ್ಲಿ ಡಾಂಬರು ಅಥವಾ ಕಾಂಕ್ರಿಟ್ ನಿರ್ಮಾಣದ ರಸ್ತೆ ಯಾಗಬೇಕಿದೆ ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಈ ಸಂದರ್ಭ ಗಣಪತಿ.ಡಿ. ನಾಯ್ಕ, ಪ್ರಭಾಕರ.ಆರ್.ನಾಯ್ಕ, ರಮೇಶ.ಕೆ.ನಾಯ್ಕ, ಉಮೇಶ.ಎನ್.ನಾಯ್ಕ, ರಮೇಶ.ಎನ್.ನಾಯ್ಕ, ಮಾರುತಿ ಎಂ ನಾಯ್ಕ, ರಾಘು ಎಂ ನಾಯ್ಕ, ಸಂಜಯ ಜಿ ಚಿತ್ರಾಪುರ ಮುಂತಾದವರು ಇದ್ದರು.

'ಈ ಹಿಂದೆ ಕಲ್ಲು ಪುಡಿ, ಮಣ್ಣು ಹಾಕಿ ಕಚ್ಛಾ ರಸ್ತೆಯನ್ನು ನಿರ್ಮಿಸಿದ್ದು ಇದು ಮಳೆಗಾಲ ಹೊರತುಪಡಿಸಿ ಉಳಿದ ವೇಳೆಯಲ್ಲಿ ಹಾಗೋ ಹೀಗೋ ಜನರು ಸಂಚರಿಸುತ್ತಿದ್ದರು. ಆದರೆ ಮಳೆಗಾಲದಲ್ಲಿ ರಸ್ತೆ ದುಸ್ಥಿತಿಗೆ ಬಂದಿದೆ. ಶೀಘ್ರದಲ್ಲಿ ಕಚ್ಚಾ ರಸ್ತೆಯಿಂದ ಜನರು ಪಕ್ಕಾ ರಸ್ತೆಯಲ್ಲಿ ಸಂಚರಿಸುವಂತಾಗಬೇಕು.
- ನಂದನ ನಾಯ್ಕ, ಗ್ರಾಮಸ್ಥರು.

ಇಲ್ಲಿನ ಜನಪ್ರತಿನಿಧಿಗಳು ಇಷ್ಟು ವರ್ಷ ಗೆದ್ದರೂ ಈ ರೋಡಿನ ಬಗ್ಗೆ ಗಮನ ಹರಿಸಲಿಲ್ಲ ಕೇಳಿದ್ರೆ ರೈಲ್ವೆ ಜಾಗ ಅಂತ ಹೇಳುತ್ತಿದ್ದಾರೆ. ರೈಲ್ವೆ ಇಲಾಖೆ ಅವರಿಗೂ ಇದೇ ರೋಡ್ ಸಂಚಾರಕ್ಕೆ ಅವಶ್ಯಕವಾಗಿದೆ. ಇನ್ನೊಂದು ರೋಡ್ ಇದೆ ಅದನ್ನಾದ್ರೂ ಸರಿ ಮಾಡಬಹುದಿತ್ತು... ಆದರೆ ಇಲ್ಲಿನ ಜನಪ್ರತಿನಿಧಿಗಳು ಅದಕ್ಕೂ ಮುಂದಾಗಲಿಲ್ಲ. ಆಯ್ಕೆಯಾದ ಅಭ್ಯರ್ಥಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
- ಮಂಜುನಾಥ ಎಂ ನಾಯ್ಕ, ಗ್ರಾಮಸ್ಥರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News