×
Ad

ಸಿನೆಮಾ ಅರ್ಥೈಸಲು ಚಿತ್ರಕತೆ ಪುಸ್ತಕ ಸಹಾಯಕ: ಗಿರೀಶ್ ಕಾಸರವಳ್ಳಿ

Update: 2019-07-13 23:09 IST

ಮಂಗಳೂರು, ಜು.13: ಸಿನೆಮಾ ನಮ್ಮಲ್ಲಿ ವೈಚಾರಿಕವಾದ ಪ್ರಚೋದನೆಯನ್ನುಂಟು ಮಾಡುವಂತಾಗಬೇಕು. ಸಿನೆಮಾವನ್ನು ಇನ್ನಷ್ಟು ಅರ್ಥ ಮಾಡಲು ಚಿತ್ರಕತೆ ಪುಸ್ತಕ ಸಹಾಯಕವಾಗಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.

ನಗರದ ಮಂಗಳೂರು ವಿಶ್ವವಿದ್ಯಾನಿಲ ದ ರವೀಂದ್ರ ಕಲಾಭವನದಲ್ಲಿಂದು ಪಡ್ಡಾಯಿ- ಚಿತ್ರ ಕಟ್ಟಿದ ಕತೆ ಹಾಗೂ ಚಿತ್ರಕತೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಸಿನೆಮಾ ಕೇವಲ ಮನೋರಂಜನೆ ನೀಡುವ ಮಾಧ್ಯಮವಲ್ಲ. ಸಿನೆಮಾ ಸಾಮಾಜಿಕ ಸಂರಚನೆಯ ದೋಷಗಳನ್ನು ಗುರುತಿಸು ವಂತಾಗಬೇಕು. ಸಮಕಾಲಿನ ಸಮಾಜಕ್ಕೆ ಸಿನೆಮಾ ನಮ್ಮ ಅರಿವನ್ನು ಹೆಚ್ಚಿಸುವಂತಾಗಬೇಕು ಎಂದರು.

ಪಡ್ಡಾಯಿ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ದಿಕ್ಕನ್ನು ತೋರುವ ವಿಶೇಷ ಚಿತ್ರವಾಗಿದೆ. ಪಡ್ಡಾಯಿ ಶೇಕ್ಸ್‌ಪಿಯರ್‌ನ ಮ್ಯಾಕ್‌ಬೆಥ್ ಕ್ರತಿಯ ಪ್ರೇರಣೆಯೊಂದಿಗೆ ಮರುಸೃಷ್ಟಿ ಪಡೆದ ಕೃತಿಯಾಗಿದೆ. ಪಡ್ಡಾಯಿ ಕರಾವಳಿಯ ಸಂಸ್ಕೃತಿಯನ್ನು ಒಳಗೊಂಡ ಉತ್ತಮ ಸಿನೆಮಾ. ಪಡ್ಡಾಯಿ ಯ ಭೂತ ತುಳುನಾಡಿನ ಜನರ ಕುಲದೈವ ಅದು ಆಂಗ್ಲ ಭಾಷೆಯಲ್ಲಿ ಭೂತ ಎಂದರೆ ಡೆವಿಲ್, ಕೆಟ್ಟದನ್ನುನ ಉಂಟು ಮಾಡುತ್ತದೆ ಎನ್ನುವ ನಂಬಿಕೆಗಿಂತ ಭಿನ್ನವಾಗಿದೆ ಗಿರೀಶ್ ಕಾಸರವಳ್ಳಿ ಎಂದರು.

ಚಿತ್ರದ ಸಂಗೀತ ಬಿಡುಗಡೆ ಮಾಡಿ ಮಾತನಾಡಿದ ಲೇಖಕ ಗೋಪಾಲಕೃಷ್ಣ ಪೈ, ತುಳು ಸಿನೆಮಾ ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡುವ ಕಾಲದಲ್ಲಿ ಪಡ್ಡಾಯಿ ಒಂದು ಹೊಸ ಆಯಾಮದ ಸಿನೆಮಾ. ಈ ಸಿನೆಮಾ ಮ್ಯಾಕ್ ಬೆತ್ ನ ವಿಚಾರ ಮಾತ್ರವಲ್ಲದೆ ಇಲ್ಲಿ ವ್ಯಾಸನ ಮಹಾಭಾರತ ಕಾಣುತ್ತದೆ ಎಂದು ಹೇಳಿದರು. ನಟ ಚಂದ್ರ ಹಾಸ ಉಳ್ಳಾಲ್ ಮಾತನಾಡುತ್ತಾ ಪಡ್ಡಾಯಿ ಸಿನಿಮಾ ತುಳು ಚಿತ್ರರಂಗದಲ್ಲಿ ಒಂದು ವಿಶಿಷ್ಟ ಪ್ರಯೋಗ. ಸಹಕಾರಿ ತತ್ವದಲ್ಲಿ ನಿರ್ಮಾಣಗೊಂಡ ವಿಶೇಷ ಚಿತ್ರ ಈಗಾಗಲೇ ಹಲವು ಪ್ರಶಸ್ತಿ ಗಳಿಗೆ ಪಾತ್ರ ವಾಗಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ಪಡ್ಡಾಯಿ ಸಿನಿಮಾ ತಂಡದ ನಿರ್ದೇಶಕ ಆಭಯ ಸಿಂಹ, ನಿರ್ಮಾಪಕ ನಿತ್ಯಾನಂದ, ಸಂಗೀತ ನಿರ್ದೇಶಕ ಮಣಿಕಾಂತ ಕದ್ರಿ,ಗೋಪಾಲಕೃಷ್ಣ ಪೈ ಮೊದಲಾದ ವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಮೊದಲಾದ ವರು ಉಪಸ್ಥಿತರಿದ್ದರು.ರಶ್ಮಿಅಭಯ ಸಿಂಹ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News