ಮಂಗಳೂರು ಜೈಲು ಅಧಿಕಾರಿಗಳ ಎಡವಟ್ಟು: ಜಾಮೀನು ಸಿಗದ ಆರೋಪಿಗಳ ಬಿಡುಗಡೆ !

Update: 2019-07-14 04:28 GMT

ಮಂಗಳೂರು: ಒಮ್ಮೆ ಜೈಲು ಸೇರಿದರೆ ಮತ್ತೆ ಆ ಖೈದಿ ಬಿಡುಗಡೆಗೆ ಕೋರ್ಟ್ ಜಾಮೀನು ನೀಡಲೇಬೇಕು. ಇಲ್ಲವಾದರೆ ಪೆರೋಲ್ ಪಡೆದು ಅಥವಾ ಪ್ರಕರಣವೇ ಖುಲಾಸೆಯಾಗಬೇಕು. ಹೀಗಾದರೆ ಮಾತ್ರ ಖೈದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಇಲ್ಲಿ ಜೈಲಾಧಿಕಾರಿಗಳು ಮಾಡಿದ ಎಡವಟ್ಟಿಗೆ ಜಾಮೀನು ಸಿಗದೆ ಇದ್ದರೂ ಜೈಲಿನಿಂದ ಇಬ್ಬರು ಖೈದಿಗಳನ್ನು ಬಿಡುಗಡೆಗೊಳಿಸಿದ ಪ್ರಸಂಗ ದ.ಕ. ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

2016ರ ಮೇ 15ರಂದು ಬಿಜೈ ಕೆಎಸ್ಆರ್’ಟಿಸಿ ಬಳಿ ನಡೆದ ಕದ್ರಿ ರೋಹಿತ್ ಕೋಟ್ಯಾನ್ ಕೊಲೆ ಪ್ರಕರಣದ ಆರೋಪಿಗಳಾಗಿರುವ ಕದ್ರಿ ಜಾರ್ಜ್ ಮಾರ್ಟಿಸ್ ರಸ್ತೆ ನಿವಾಸಿ ಶಿವಾಜಿ ಮತ್ತು ಬಿಕರ್ನಕಟ್ಟೆ ಕಂಡೆಟ್ಟು ನಿವಾಸಿ ಜಗದೀಶ್ ಬಿಡುಗಡೆಗೊಂಡವರು.

ಇವರಿಬ್ಬರಿಗೂ ಕೋರ್ಟ್ ನಿಂದ ಆದೇಶ ಬಂದಿದ್ದು ಇದನ್ನು ಜಾಮೀನು ಬಿಡುಗಡೆ ಆದೇಶ ಎಂದು ತಪ್ಪಾಗಿ ತಿಳಿದ ಜೈಲರ್ ಗಳು ಜೈಲು ಅಧೀಕ್ಷಕರ ಅನುಮತಿ ಪಡೆದು ಜು. 9ರಂದು ಬಿಡುಗಡೆಗೊಳಿಸಿದ್ದರು ಎಂದು ತಿಳಿದುಬಂದಿದೆ.

ಜಾಮೀನು ಸಿಕ್ಕಿತು ಎಂದು ಆರೋಪಿಗಳು ಖುಷಿಯಿಂದಲೇ ಮನೆಗೆ ಹೋಗಿದ್ದರು. ಬಳಿಕ ತಮ್ಮ ವಕೀಲರ ಬಳಿ ತೆರಳಿ ಈ ಬಗ್ಗೆ ವಿಚಾರಿಸಿದ್ದರು. ಈ ಸಂದರ್ಭ ವಕೀಲರಿಗೆ ಅಚ್ಚರಿ ಕಾದಿತ್ತು. ತಕ್ಷಣ ಎಚ್ಚೆತ್ತ ವಕೀಲರು ಜೈಲಿನಲ್ಲಿ ಆದ ಎಡವಟ್ಟಿನ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

ಜೈಲಾಧಿಕಾರಿಗಳು ಆರೋಪಿಗಳ ಮನೆಗೆ ಹೋಗಿ ಮತ್ತೆ ಅವರನ್ನು ವಶಕ್ಕೆ ಪಡೆದು ಜೈಲಿಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News