ಪೂರ್ವ ಇಂಡೋನೇಶ್ಯಾದಲ್ಲಿ ಭಾರೀ ಭೂಕಂಪನ

Update: 2019-07-14 18:22 GMT

 ಇಂಡೊನೇಶ್ಯ,ಜು.14: ಪೂರ್ವ ಇಂಡೊನೇಶ್ಯದ ದುರ್ಗಮ ಮಲಾಕು ದ್ವೀಪಸ್ತೋಮದಲ್ಲಿ ರವಿವಾರ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆಯನ್ನು ದಾಖಲಿಸಿರುವ ಭೂಕಂಪವು ಸ್ಥಳೀಯ ಕಾಲಮಾನ ಸಂಜೆ 6.28ರ ವೇಳೆಗೆ ಸಂಭವಿಸಿದೆ. ಆದರೆ ಯಾವುದೇ ಸುನಾಮಿ ಮುನ್ನೆಚ್ಚರಿಕೆಯನ್ನು ನೀಡಲಾಗಿಲ್ಲ.

   ಭೂಕಂಪದ ಅನುಭವವಾಗುತ್ತಿದ್ದಂತೆಯೇ ಜನರು ಭಯಭೀತರಾಗಿ ಮನೆ, ಕಟ್ಟಡಗಳಿಂದ ಹೊರಗೋಡಿ ಬಂದರು ಎಂದು ವರದಿಗಳು ತಿಳಿಸಿವೆ. ಉತ್ತರ ಮಲಾಕು ಪ್ರಾಂತದ ಟೆರ್ನೆಟ್ ಪಟ್ಟಣದ ನೈಋತ್ಯ ಭಾಗದಲ್ಲಿ, ಭೂಮಿಯಿಂದ 165 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತೆಂದು ಅಮೆರಿಕದ ಭೌಗೋಳಿಕ ಸಮೀಕ್ಷೆ ಇಲಾಖೆ ತಿಳಿಸಿದೆ.

 ಅಧಿಕಾರಿಗಳು ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ, ಆದರೆ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ಈವರೆಗೆ ವರದಿಗಳು ಬಂದಿಲ್ಲ.

  ಭೂಕಂಪದ ಕೇಂದ್ರಬಿಂದುವಿನ ಸಮೀಪದ ಪಟ್ಟಣವಾದ ಲಾಬುಹಾದಲ್ಲಿ ಭೂಮಿ ನಡುಗಿದ ಅನುಭವವಾಗುತ್ತಿದ್ದಂತೆಯೇ ಭಯಭೀತರಾದ ನಾಗರಿಕರು ಮೋಟಾರು ಸೈಕಲ್‌ಗಳಲ್ಲಿ ಎತ್ತರದ ಪ್ರದೇಶಗಳಿಗೆ ಧಾವಿಸಲು ಯತ್ನಿಸಿದರೆಂದು, ಪ್ರತ್ಯಕ್ಷದರ್ಶಿ ಯಾದ ಸುದ್ದಿಸಂಸ್ಥೆ ಛಾಯಾಗ್ರಾಹಕರೊಬ್ಬರು ತಿಳಿಸಿದ್ದಾರೆ.

ದ್ವೀಪಸ್ತೋಮ ರಾಷ್ಟ್ರವಾದ ಇಂಡೊನೇಶ್ಯ ಪದೇ ಪದೇ ಭೂಕಂಪ ಹಾಗೂ ಜ್ವಾಲಾಮುಖಿಯ ಪ್ರಕೋಪಕ್ಕೆ ತುತ್ತಾಗುತ್ತಿದೆ. ಪೆಸಿಫಿಕ್ ಪ್ರದೇಶದಲ್ಲಿ ಭೂಮಿ ಟೆಕ್ನೊಟಿಕ್ ಪದರಗಳು ಪರಸ್ಪರ ಡಿಕ್ಕಿಹೊಡೆಯುವ ಪ್ರದೇಶದಲ್ಲಿ ಆ ದೇಶವಿರುವುದೇ ಇದಕ್ಕೆ ಕಾರಣ.

   ಕಳೆದ ವರ್ಷ ಸುಲಾವೆಸಿ ದ್ವೀಪದ ಪಾಲು ನಗರದಲ್ಲಿ 7.5 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿ, 2200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.2004ರ ಡಿಸೆಂಬರ್ 26ರಂದು ಸುಮಾತ್ರ ದ್ವೀಪದ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸುನಾಮಿ ಅಲೆಗಳು ಎದ್ದು, ಇಂಡೊನೇಶ್ಯದ 1.70 ಲಕ್ಷ ಮಂದಿ ಸೇರಿದಂತೆ ಹಿಂದೂ ಮಹಾಸಾಗರ ಪ್ರದೇಶದಾದ್ಯಂತ 2.29 ಲಕ್ಷ ಮಂದಿ ಮೃತಪಟ್ಟಿದ್ದರು.

ಆಸ್ಟ್ರೇಲಿಯದಲ್ಲೂ ನಡುಗಿದ ಭೂಮಿ

  ಆಸ್ಟ್ರೇಲಿಯದ ಕರಾವಳಿ ವಿಹಾರಧಾಮವಾದ ಬ್ರೂಮ್‌ನಲ್ಲಿ ರವಿವಾರ 6.9 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಭೌಗೋಳಿಕ ಸಮೀಕ್ಷೆ ಇಲಾಖೆ ತಿಳಿಸಿದೆ.

  ಭೂಕಂಪದಲ್ಲಿ ಯಾವುದೇ ಸಾವುನೋವು ಅಥವಾ ಹಾನಿ ಸಂಭವಿಸಿರುವ ಬಗ್ಗೆ ವರದಿ ಯಾಗಿಲ್ಲ. ಪಶ್ಚಿಮ ಆಸ್ಟ್ರೇಲಿಯ ರಾಜ್ಯದ ಬ್ರೂಮ್ ಪಟ್ಟಣದ ಸಮುದ್ರಪ್ರದೇಶದಿಂದ 203 ಕಿ.ಮೀ. ದೂರದಲ್ಲಿ ಸಮುದ್ರದ 33 ಕಿ.ಮೀ. ಆಳದಲ್ಲಿ ಭೂಕಂಪ ಸಂಭವಿಸಿರುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News