ಮಂಗಳೂರು: ವಂಚನೆ ಪ್ರಕರಣ ಗಂಭೀರವಾಗಿ ಪರಿಗಣಿಸಲು ಪಿಯುಸಿಎಲ್ ಒತ್ತಾಯ
ಮಂಗಳೂರು : ಫರಂಗಿಪೇಟೆ ನಿವಾಸಿ ನೋಯೆಲ್ ಮೈಕೆಲ್ ಸಲ್ದಾನ್ಹ ಎಂಬವರ ಮನೆ ಹಾಗೂ ಆಸ್ತಿ ದಾಖಲೆಯನ್ನು ಅವರ ಗಮನಕ್ಕೆ ತಾರದೆ ಬ್ಯಾಂಕ್‌ನಲ್ಲಿ ಅಡವಿಟ್ಟು ಇಬ್ಬರು ವ್ಯಕ್ತಿಗಳು ಬ್ಯಾಂಕ್‌ನಿಂದ ಭಾರೀ ಸಾಲ ಪಡೆದು ವಂಚಿಸಿದ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗು ತ್ತಿದೆ. ಪೊಲೀಸ್ ಇಲಾಖೆ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನು ಪೊಲೀಸ್ ಇಲಾಖೆಗೆ ಈಗಾಗಲೇ ನೀಡಲಾಗಿದ್ದು, ಅವೆಲ್ಲವನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಪಿಯುಸಿಎಲ್ ಸಂಸ್ಥೆ ಒತ್ತಾಯಿಸಿದೆ.
ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್‌ನ ಈಶ್ವರರಾಜ್ ಮಾತನಾಡಿದರು.
ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಸಂತ್ರಸ್ತ ನೋಯೆಲ್ ಅವರ ಮನೆ ಹಾಗೂ ಆಸ್ತಿಯನ್ನು ಹರಾಜು ಹಾಕಬಾರದು. ಆರೋಪಿಗಳು ಇನ್ನೂ ಹಲವರಿಗೆ ಈ ರೀತಿ ವಂಚನೆ ಮಾಡಿದ್ದು, ಭವಿಷ್ಯದಲ್ಲಿ ಮತ್ತಷ್ಟು ಮಂದಿ ವಂಚನೆಗೀಡಾಗುವುದನ್ನು ತಪ್ಪಿಸಲು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.
ಫರಂಗಿಪೇಟೆ ಮೇರ್ಲಪದವು ನಿವಾಸಿ ನೋಯೆಲ್ ಮೈಕೆಲ್ ಸಲ್ದಾನ್ಹ 2017ರಲ್ಲಿ ಪರಿಚಿತರಾದ ಇಬ್ರಾಹೀಂ ಎಂಬವರನ್ನು ಭೇಟಿಯಾಗಿ 3.50 ಲಕ್ಷ ರೂ. ಅಗತ್ಯವನ್ನು ತಿಳಿಸಿದ್ದರು. ಅವರು ಶೇಖ್ ಅಬ್ದುಲ್ಲಾ ಹಾಗೂ ಆ್ಯಂಬ್ರೋಸ್ ಡಿಸೋಜ ಅವರನ್ನು ನೋಯೆಲ್‌ಗೆ ಪರಿಚಯಿಸಿದ್ದರು.
ಇವರಿಬ್ಬರು ನೋಯೆಲ್ ಅವರ ಮನೆ ಹಾಗೂ ಆಸ್ತಿ (35 ಸೆಂಟ್ಸ್ ಜಾಗ) ಯನ್ನು ಅವರಿಗೇ ಗೊತ್ತಿಲ್ಲದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಬಂದರು ಶಾಖೆಗೆ ಸಲ್ಲಿಸಿ 36 ಲಕ್ಷ ರೂ. ಮೊತ್ತದ ಭಾರಿ ಸಾಲ ಪಡೆದಿದ್ದರು ಎಂದು ಆರೋಪಿಸಿದರು.
ಬ್ಯಾಂಕ್‌ನಿಂದ ಸಾಲ ಪಡೆದ ಬಳಿಕ ನೋಯೆಲ್‌ಗೆ 3.50 ಲಕ್ಷ ರೂ. ಸಾಲ ನೀಡಿದ್ದರು. ಈ ನಡುವೆ, ನೋಯೆಲ್ ಅವರ ತಪ್ಪೇ ಇಲ್ಲದೆ ಆಸ್ತಿ ಹರಾಜು ಹಾಕಲು ಬ್ಯಾಂಕ್ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಆಸ್ತಿ ಹರಾಜು ಮಾಡಬಾರದು. ಹೀಗೆ ಮಾಡಿದರೆ ಕೂಲಿ ಮಾಡಿ ಬದುಕುತ್ತಿರುವ ಬಡ ಕುಟುಂಬವೊಂದು ಬೀದಿಪಾಲಾಗಲಿದೆ ಎಂದು ಈಶ್ವರರಾಜ್ ಹೇಳಿದರು.
ಆರೋಪಿಗಳಾದ ಶೇಖ್ ಅಬ್ದುಲ್ಲಾ ಮತ್ತು ಆ್ಯಂಬ್ರೋಸ್ ಡಿಸೋಜ ವಿರುದ್ಧ ಜಾಮೀನು ಸಿಗುವಂಥ ದುರ್ಬಲ ಕಲಂಗಳನ್ನು ಎಫ್‌ಐಆರ್‌ನಲ್ಲಿ ಹಾಕಿದ್ದರಿಂದ ಅವರಿಬ್ಬರು ಬಂಧಿಸಿದ ನಾಲ್ಕೇ ದಿನದೊಳಗೆ ಜಾಮೀನು ಪಡೆದು ಹೊರಬಂದಿದ್ದಾರೆ. ಜಾಮೀನು ಸಿಕ್ಕಿದ ಬಳಿಕ ಸಹಿ ಫೋರ್ಜರಿ, ವಂಚನೆ ಇತ್ಯಾದಿ ಕಲಂಗಳನ್ನು ಸೇರಿಸಲಾಗಿದೆ. ಆರೋಪಿಗಳು ಬ್ಯಾಂಕ್‌ನಿಂದ ಭಾರೀ ಸಾಲ ಪಡೆಯುವಾಗ ಶೇಖ್ ಅಬ್ದುಲ್ಲಾ ಪಾಲುದಾರಿಕೆಯ ಎಂಟರ್‌ಪ್ರೈಸಸ್‌ವೊಂದರಲ್ಲಿ ಸಂತ್ರಸ್ತ ನೋಯೆಲ್ ಕೂಡ ಪಾಲುದಾರ ಎಂದು ತಪ್ಪಾಗಿ ತೋರಿಸಿ ಸಾಲ ಪಡೆಯಲಾಗಿತ್ತು.
ನೋಯೆಲ್ ಅವರ ತಂದೆಯ ಸಹಿಯನ್ನು ಫೋರ್ಜರಿ ಮಾಡಿ ಅವರ ಜಾಗದ ಕನ್ವರ್ಶನ್ ಕೂಡ ಮಾಡಿದ್ದಾರೆ. ಇದೆಲ್ಲ ದಾಖಲೆಗಳನ್ನು ಪೊಲೀಸರಿಗೆ ನೀಡಲಾಗಿದೆ. ಆರೋಪಿಗಳನ್ನು ಪ್ರಕರಣದಿಂದ ತಪ್ಪಿಸಿಕೊಳ್ಳದಂತೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಇನ್ನೂ ಹಲವರು ಈ ಪ್ರಕರಣದಲ್ಲಿದ್ದು, ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಿಯುಸಿಎಲ್ ಮುಖಂಡರಾದ ಪಿ.ಬಿ.ಡೇಸಾ, ಅಜಯ್ ಡಿಸಿಲ್ವ, ಸಂತ್ರಸ್ತ ನೋಯೆಲ್ ಸಲ್ದಾನ್ಹ, ಅವರ ತಂದೆ ಜಾನ್ ಸಲ್ದಾನ್ಹ ಉಪಸ್ಥಿತರಿದ್ದರು.