×
Ad

ಕುವೈತ್‌ನಲ್ಲಿ ಸಂಕಷ್ಟಕ್ಕೀಡಾದ ಪ್ರಕರಣ: ಜು.15ರಂದು 15 ಸಂತ್ರಸ್ತರ 2ನೇ ತಂಡ ಭಾರತಕ್ಕೆ

Update: 2019-07-14 20:09 IST

ಮಂಗಳೂರು, ಜು.14: ಕುವೈತ್ ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯ ಸಂತ್ರಸ್ತ ಕಾರ್ಮಿಕರ ಪೈಕಿ ಇಬ್ಬರು ಶನಿವಾರ ತಾಯ್ನಡಿಗೆ ಮರಳಿದ್ದಾರೆ. ಬಾಕಿಯುಳಿದವರಲ್ಲಿ 15 ಮಂದಿಯ ಎರಡನೇ ತಂಡ ಜು.15ರಂದು ಕುವೈತ್ ನಿಂದ ಭಾರತಕ್ಕೆ ಹೊರಡಲಿದೆ.

ಪ್ರಥಮ ಹಂತದಲ್ಲಿ ಸ್ವದೇಶಕ್ಕೆ ಆಗಮಿಸಿದ ಇಬ್ಬರ ವೀಸಾ ರದ್ದುಗೊಂಡಿಲ್ಲ. ಆದರೆ ರಜೆಯ ಅವಧಿಯನ್ನು ಪಡೆದುಕೊಂಡು ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಮತ್ತು ಉತ್ತರಪ್ರದೇಶದ ಪಂಕಜ್  ವಾಪಸ್ ಆಗುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತೀಯ ಕಾರ್ಮಿಕರಿಗೆ ಉದ್ಯೋಗ ವಂಚನೆ ದೂರಿನ ಹಿನ್ನೆಲೆಯಲ್ಲಿ ಹಿಂದಿನ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚನೆ ಮೇರೆಗೆ ಕುವೈತ್ನ ಪಾಮ್(ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್‌ಪವರ್) ಮತ್ತು ಕಾರ್ಮಿಕ ನ್ಯಾಯಾಲಯ ಶೋನ್, ಉದ್ಯೋಗ ನೀಡಿದ ಕಂಪೆನಿಯ ಕಡತಗಳನ್ನು ಅಮಾನತಿನಲ್ಲಿ ಇರಿಸಿತ್ತು. ಇದೀಗ ರವಿವಾರ ಭಾರತೀಯ ರಾಯಭಾರಿ ಕಚೇರಿಯ ಸೂಚನೆ ಮೇರೆಗೆ ಸಂತ್ರಸ್ತರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಕಡತ ಅಮಾನತನ್ನು ತೆರವುಗೊಳಿಸಿತ್ತು. ಇದರಿಂದಾಗಿ ಇನ್ನು ವೀಸಾ ರದ್ದತಿ ಸುಲಭವಾಗಲಿದೆ ಎಂದು ಅನಿವಾಸಿ ಭಾರತೀಯ ಮೂಲಗಳು ತಿಳಿಸಿವೆ.

ಜು.15ಕ್ಕೆ 15 ಮಂದಿ ಸ್ವದೇಶಕ್ಕೆ

ಉದ್ಯೋಗ ಕಂಪೆನಿಯು ಹಂತ ಹಂತವಾಗಿ ವೀಸಾ ರದ್ದತಿಗೆ ಸಮ್ಮತಿಸಿರುವುದರಿಂದ ಜು.15ರಂದು 15 ಮಂದಿ ಇರುವ ಆಂಧ್ರದ ತಂಡ ಸ್ವದೇಶಕ್ಕೆ ಹೊರಡಲಿದೆ. ಜು.17ರಂದು 19 ಮಂದಿ ಮಂಗಳೂರಿಗರು ಆಗಮಿಸಲಿದ್ದಾರೆ. ಬಳಿಕ ವಿವಿಧ ಹಂತಗಳಲ್ಲಿ ಸಂತ್ರಸ್ತರು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ. ಆದರೆ ಜಿಪಿ ಪತ್ರ ಹಾಗೂ ಟಿಕೆಟ್ ಸಿಗದೆ ಅತಂತ್ರ ಸ್ಥಿತಿಯಲ್ಲಿರುವ ಮತ್ತೆ 15 ಮಂದಿಯ ಬಿಡುಗಡೆ ಬಾಕಿಯಾಗಿದೆ.

ಇಂದು ಮಂಗಳೂರಿಗೆ: ಕುವೈತ್‌ನಿಂದ ಶನಿವಾರ ರಾತ್ರಿ ಹೊರಟ ಮಂಗಳೂರಿನ ಮಂಜೇಶ್ವರ ಬಡಾಜೆ ನಿವಾಸಿ ಅಭಿಷೇಕ್ ಜು.15ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.

ಶನಿವಾರ ರಾತ್ರಿ ಕುವೈಟ್‌ನಿಂದ ಹೊರಟ ಅಭಿಷೇಕ್, ಅಲ್ಲಿಂದ ರವಿವಾರ ಮುಂಬೈಗೆ ಆಗಮಿಸಿದ್ದರು. ಮುಂಬೈನಿಂದ ಬಸ್ ಮೂಲಕ ಮಂಗಳೂರಿಗೆ ಸೋಮವಾರ ಬೆಳಗ್ಗೆ 6:30ಕ್ಕೆ ಆಗಮಿಸಲಿದ್ದಾರೆ. ಮಂಗಳೂರಿನಿಂದ ಸ್ವಂತ ಊರು ಮಂಜೇಶ್ವರಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಲವರ ಸಹಕಾರ

ಕುವೈತ್‌ನ ಭಾರತೀಯ ರಾಯಭಾರ ಕಚೇರಿ ಸೆಕೆಂಡ್ ಸೆಕ್ರೆಟರಿ ಸಿಬಿ ಯು.ಎಸ್., ಕುವೈತ್‌ನ ಭಾರತೀಯ ರಾಯಭಾರಿ ಕೆ.ಜೀವ ಸಾಗರ್, ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್‌ಕುಮಾರ್ ಕಟೀಲ್, ಇಂಜಿನಿಯರ್ ಮೋಹನ್‌ದಾಸ್ ಕಾಮತ್, ಕುವೈತ್‌ನ ಅದಿತಿ ಇಂಟರ್‌ ನ್ಯಾಶನಲ್‌ನ ಚೇರ್‌ಮನ್ ಆಕಾಶ್ ಎಸ್. ಪನ್ವಾರ್, ಅನಿವಾಸಿ ಭಾರತೀಯರಾದ ಗೋಕುಲ್‌ದಾಸ್, ಬಿನು ಫಿಲಿಪ್, ಇಂಬತಮಿಝ್ ಇಲಂಗೋವನ್, ಜೋಸೆಫ್ ಪನಿಕರ್, ಬಿ.ಶೇಖರ್, ರಾಜ್ ಭಂಡಾರಿ, ವಿಜತ್ ಫೆರ್ನಾಂಡಿಸ್, ಮಾಧವ ನಾಯ್ಕಾ, ನೌಶಾದ್ ಬಜ್ಪೆ, ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಶನ್ ನ ಮಬಿಯಾ ಕಡಬ ಮತ್ತಿತರರು ಕುವೈತ್‌ನಲ್ಲಿದ್ದ ಸಿಲುಕಿದ್ದ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ್ದಾರೆ ಎಂದು ಅನಿವಾಸಿ ಭಾರತೀಯ ಇಂಜಿನಿಯರ್ ಮೋಹನ್‌ದಾಸ್ ಕಾಮತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News