ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತ ಸಮಾಜ: ಡಿ. ವೀರೇಂದ್ರ ಹೆಗ್ಗಡೆ

Update: 2019-07-14 16:10 GMT

ಬೆಳ್ತಂಗಡಿ: ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತ ಆರೋಗ್ಯ ಪೂರ್ಣ ಸಮಾಜ ರೂಪಿಸುವುದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಉದ್ದೇಶವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ರವಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯಕಾರಿ ಮಂಡಳಿಯ ಮಹಾ ಸಭೆಯಲ್ಲಿ ಮಾರ್ಗದರ್ಶನ ನೀಡಿ ಮಾತನಾಡಿದರು.

ಮದ್ಯ ವರ್ಜನ ಶಿಬಿರಗಳಲ್ಲಿ ಮಾನಸಿಕ ಪರಿವರ್ತನೆ ಮೂಲಕ ವ್ಯಸನ ಮುಕ್ತರನ್ನಾಗಿ ಮಾಡಿ ಮತ್ತೆ ಅವರು ಮದ್ಯಪಾನಕ್ಕೆ ಬಲಿಯಾಗದಂತೆ ನವಜೀವನ ಸಮಿತಿಗಳ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಜನಜಾಗೃತಿ ವೇದಿಕೆಯ ಅಳಿಲ ಸೇವೆ ಅದ್ಭುತ ಪರಿಣಾಮ ಬೀರಿದೆ. ಯುವ ಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ಅಲ್ಲಲ್ಲಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಅಮಲು ಪದಾರ್ಥ ಸೇವನೆಗೆ ಬಲಿಯಾಗುತ್ತಿರುವುದು ಖೇದಕರವಾಗಿದೆ. ಪೊಲೀಸ್ ಇಲಾಖೆಯವರು ಗಾಂಜಾ ಮಾರಾಟ ಪತ್ತೆ ಮಾಡಿ, ಡ್ರಗ್ಸ್ ಮಾರಾಟ ತಡೆಗಟ್ಟುವಲ್ಲಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಮತ್ತು ಮದ್ಯಪಾನ ಸಂಯಮ ಮಂಡಳಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ರಕ್ಷಣೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಶಾಲಾ-ಕಾಲೇಜುಗಳಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವ್ಯಸನಗಳ ದುಷ್ಪಾರಿಣಾಮಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಲಾಗುತ್ತದೆ ಎಂದು ಹೆಗ್ಗಡೆಯವರು ಹೇಳಿದರು.

ವರ್ಷಕ್ಕೆ 165 ಮದ್ಯ ವರ್ಜನ ಶಿಬಿರಗಳನ್ನು ನಡೆಸಿ ಹತ್ತು ಸಾವಿರಕ್ಕೂ ಮಿಕ್ಕಿ ಮದ್ಯ ವ್ಯಸನಿಗಳನ್ನು ವ್ಯಸನ ಮುಕ್ತರನ್ನಾಗಿ ಮಾಡಲಾಗುತ್ತದೆ. ಪಾನಮುಕ್ತರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸ್ವ-ಸಹಾಯ ಸಂಘದ ಪರಿಕಲ್ಪನೆ ಹಾಗೂ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡಲಾಗುತ್ತದೆ. ದುಶ್ಚಟಗಳ ವಿರುದ್ಧ ಹೋರಾಟವನ್ನು ಮುಂದೆ ಇನ್ನೂ ಹೆಚ್ಚು ಶಿಸ್ತುಬದ್ಧವಾಗಿ, ವ್ಯವಸ್ಥಿತವಾಗಿ ನಡೆಸಲಾಗುವುದುಎಂದು ಹೇಳಿದ ಹೆಗ್ಗಡೆಯವರು ಜನಜಾಗೃತಿ ವೇದಿಕೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸೇವೆ, ತ್ಯಾಗ ಮನೋಭಾವವನ್ನು ಶ್ಲಾಘಿಸಿ ಅಭಿನಂದಿಸಿದರು.

ನೂತನ ರಾಜ್ಯಾಧ್ಯಕ್ಷರು: ಅಖಿಲ ಕರ್ನಾಟಕದಜನಜಾಗೃತಿ ವೇದಿಕೆಯ ನೂತನ ರಾಜ್ಯಾಧ್ಯಕ್ಷರಾಗಿ ಬೆಂಗಳೂರು ಗ್ರಾಮಾಂತರದ ರಾಮಸ್ವಾಮಿ ಅವರನ್ನುಆಯ್ಕೆ ಮಾಡಲಾಯಿತು. ಪ್ರಸ್ತುತ ರಾಜ್ಯಾಧ್ಯಕ್ಷರಾದ ಸತೀಶ್ ಹೊನ್ನವಳ್ಳಿ ಅವರು ನೂತನ ಅಧ್ಯಕ್ಷರಿಗೆ ಹೆಗ್ಗಡೆಯವರ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.

ಹೇಮಾವತಿ ವಿ. ಹೆಗ್ಗಡೆಯವರು ಜನಜಾಗೃತಿ ವೇದಿಕೆಯ ವರದಿ ಬಿಡುಗಡೆಗೊಳಿಸಿದರು. ವೀರೇಂದ್ರ ಹೆಗ್ಗಡೆಯವರು ಜಾಲತಾಣವನ್ನು ಲೋಕಾರ್ಪಣೆ ಮಾಡಿದರು.

ಸಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಧ್ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲ್ಯಾನ್, ಮಾಜಿ ರಾಜ್ಯಾಧ್ಯಕ್ಷರಾದ ದೇವದಾಸ್ ಹೆಬ್ಬಾರ್, ಪ್ರಾದೇಶಿಕ ನಿರ್ದೇಶಕ ಕೆ.ಮಹಾವೀರಅಜ್ರಿ, ಗಂಗಾಧರರೈ, ಪಿ.ಕೆ. ಪುರುಶೋತ್ತಮ, ಆನಂದ ಸುವರ್ಣ, ದುಗ್ಗೇಗೌಡ ಉಪಸ್ಥಿತರಿದ್ದರು. ವಿವೇಕ್  ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News