ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ದ ಧ್ವನಿ: ದಿನಕರ ಬಾಬು

Update: 2019-07-16 14:47 GMT

ಉಡುಪಿ, ಜು.16:ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾಯಕದಲ್ಲಿ ತೊಡಗಿಸಿಕೊಂಡ ಹಡಪದ ಅಪ್ಪಣ್ಣ, ಬಸವಣ್ಣನವರಂತೆ ತಮ್ಮ ವಚನಗಳ ಮೂಲಕ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ ಸಮಾಜದ ಒಳಿತಿಗಾಗಿ ದುಡಿದಿದ್ದಾರೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಮಂಗಳವಾರ, ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರಕಾರ ಹಡಪದ ಅಪ್ಪಣ್ಣರಂತ ಪುಣ್ಯ ಪುರುಷರ ಜಯಂತಿಯನ್ನು ಆಚರಿಸುವ ಮೂಲಕ ಅವರ ವಿಚಾರಧಾರೆಗಳ ಕುರಿತು ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಪ್ರತಿಭೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲಾ ಸಮುದಾಯದವರು ಸಮಾಜ ತಿದ್ದುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬುದಕ್ಕೆ ಹಡಪದ ಅಪ್ಪಣ್ಣರ ವಚನ ಸಾಹಿತ್ಯಗಳು ಉತ್ತಮ ನಿದರ್ಶನ ಎಂದು ದಿನಕರಬಾಬು ಹೇಳಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ ಹಡಪದ ಅಪ್ಪಣ್ಣರ ಬಗ್ಗೆ ಇನ್ನಷ್ಟು ಅಧ್ಯಯನ ಆಗಬೇಕಿದೆ. ಸರಕಾರ ಹಡಪದ ಅಪ್ಪಣ್ಣರ ಜಯಂತಿಯನ್ನು ಆಚರಿಸುವ ಮೂಲಕ ಅವರ ವಚನ ಸಾಹಿತ್ಯ, ವಿಚಾರಧಾರೆ ಗಳ ಕುರಿತು ಯುವಜನತೆಗೆ ಪರಿಚಯ ಮಾಡುವ ಕೆಲಸ ಮಾಡಿದೆ ಎಂದರು.

ವಚನಕಾರರು, 12ನೇ ಶತಮಾನದ ಕಾಲಘಟ್ಟದಲ್ಲಿ ಜಾತಿ, ಲಿಂಗ, ವರ್ಗ ತಾರತಮ್ಯದ ವಿರುದ್ದ ಧ್ವನಿ ಎತ್ತಿ ಸಾಮಾಜಿಕ ಚಳುವಳಿಯನ್ನು ಹುಟ್ಟು ಹಾಕುವುದರೊಂದಿಗೆ ಎಲ್ಲಾ ವರ್ಗದ ಜನರು ಒಂದಾಗಿ ಸಾಮಾಜಿಕ ಚಳುವಳಿ ಯನ್ನು ಕಟ್ಟಿಕೊಂಡು ಸಮಾಜದ ಪಿಡುಗುಗಳ ವಿರುದ್ದ ಹೋರಾಡಿದ್ದರು. ಈ ಸಮಯದಲ್ಲಿ ಅನೇಕ ವಚನಗಾರ್ತಿಯರೂ ತಮ್ಮ ವಚನಗಳ ಮೂಲಕ ಸಮಾಜದ ಅನಿಷ್ಠಗಳ ವಿರುದ್ಧ ಹೋರಾಡಿದ್ದಾರೆ ಎಂಬುದು ಪ್ರಮುಖ ವಿಷಯವಾಗಿದೆ ಎಂದು ವಿದ್ಯಾಕುಮಾರಿ ನುಡಿದರು.

ಆಧುನಿಕ ಕಾಲಘಟ್ಟದಲ್ಲಿ, ನಾಗರಿಕ ಸಮಾಜದಲ್ಲಿ ಇರುವ ಸಮಾಜ ಎಷ್ಟೇ ಅಭಿವೃದ್ಧಿ ಸಾಧಿಸಿದ್ದರೂ ವರ್ಗ, ಜಾತಿ, ತಾರತಮ್ಯದಿಂದ ಹೊರಬರಲಾರದೆ ಇಂದಿಗೂ ನರಳುತ್ತಿದೆ. ಇಂತಹ ಸಾಮಾಜಿಕ ಪಿಡುಗುಗಳ ವಿರುದ್ದ 12ನೇ ಶತಮಾನದಲ್ಲಿಯೇ ಹಡಪದ ಅಪ್ಪಣ್ಣರಂತ ಮಹಾನ್ ವ್ಯಕ್ತಿಗಳು ಧ್ವನಿಯೆತ್ತಿ ದ್ದರು ಎಂದರು.

ಕಾರ್ಯಕ್ರಮದಲ್ಲಿ ಎಎಸ್ಪಿ ಕುಮಾರ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಚಂದ್ರಶೇಖರ್ ಸ್ವಾಗತಿಸಿದರು. ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News