ಹತ್ಯೆಯಾಗಿದೆ ಎನ್ನಲಾಗಿದ್ದ ಉತ್ತರ ಕೊರಿಯದ ಸಂಧಾನಕಾರ ಬದುಕಿದ್ದಾರೆ: ದಕ್ಷಿಣ ಕೊರಿಯ ಸಂಸದ

Update: 2019-07-16 16:57 GMT

ಸಿಯೋಲ್ (ದಕ್ಷಿಣ ಕೊರಿಯ), ಜು. 17: ಈ ವರ್ಷದ ಫೆಬ್ರವರಿ ತಿಂಗಳಲ್ಲಿ ವಿಯೆಟ್ನಾಮ್ ರಾಜಧಾನಿ ಹನೋಯಿಯಲ್ಲಿ ನಡೆದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ನಡುವಿನ ದ್ವಿತೀಯ ಶೃಂಗ ಸಮ್ಮೇಳನ ಮಾತುಕತೆಗಳ ಉಸ್ತುವಾರಿ ವಹಿಸಿದ್ದ ಉತ್ತರ ಕೊರಿಯದ ಪ್ರತಿನಿಧಿ ಜೀವಂತವಾಗಿದ್ದಾರೆ ಎಂದು ದಕ್ಷಿಣ ಕೊರಿಯದ ಸಂಸದ ಕಿಮ್ ಮಿನ್-ಕಿ ಮಂಗಳವಾರ ಹೇಳಿದ್ದಾರೆ.

ಆ ಶೃಂಗ ಸಮ್ಮೇಳನ ಯಾವುದೇ ಒಪ್ಪಂದ ಅಥವಾ ಜಂಟಿ ಘೋಷಣೆಯಿಲ್ಲದೆ ಅರ್ಧದಲ್ಲೇ ಮೊಟಕುಗೊಂಡಿತ್ತು. ಅದಕ್ಕಾಗಿ ಉತ್ತರ ಕೊರಿಯದ ಪ್ರಧಾನ ಪರಮಾಣು ಸಂಧಾನಕಾರ ಕಿಮ್ ಹ್ಯೊಕ್ ಚೊಲ್‌ಗೆ ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮರಣ ದಂಡನೆ ವಿಧಿಸಿದ್ದರು ಎಂಬುದಾಗಿ ದಕ್ಷಿಣ ಕೊರಿಯದ ಪತ್ರಿಕೆಯೊಂದು ವರದಿ ಮಾಡಿತ್ತು.

ವಿಫಲ ಶೃಂಗ ಸಮ್ಮೇಳನದ ಬಳಿಕ, ಉತ್ತರ ಕೊರಿಯದ ಸಂಧಾನಕಾರರಿಗೆ ಏನಾಯಿತು ಎಂಬ ಬಗ್ಗೆ ಪರಸ್ಪರ ವಿರೋಧಾಭಾಸದ ವರದಿಗಳು ಬಂದಿದ್ದವು.

 ಶೃಂಗ ಸಮ್ಮೇಳನಕ್ಕೆ ಮುನ್ನ ಅಮೆರಿಕದ ಸ್ಟೀಫನ್ ಬೀಗನ್ ಜೊತೆ ಸಿದ್ಧತಾ ಮಾತುಕತೆಗಳನ್ನು ನಡೆಸಿದ್ದ ಕಿಮ್ ಹ್ಯೊಕ್ ಚೊಲ್ ಜೀವಂತವಾಗಿದ್ದಾರೆ ಎಂಬುದಾಗಿ ದಕ್ಷಿಣ ಕೊರಿಯದ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ದಕ್ಷಿಣ ಕೊರಿಯ ಸಂಸದ ಹೇಳಿದರು. ಆದರೆ, ಅವರ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಕಿಮ್ ಮಿನ್-ಕಿ ನೀಡಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News