ಉಡುಪಿ: ತಾಯಿಯಿಂದ ತೊರೆಯಲ್ಪಟ್ಟ ಐವರು ಮಕ್ಕಳ ರಕ್ಷಣೆ

Update: 2019-07-16 15:55 GMT

ಉಡುಪಿ, ಜು.16: ಹೆತ್ತ ತಾಯಿಯಿಂದಲೇ ತೊರೆಯಲ್ಪಟ್ಟ ಐವರು ಮಕ್ಕಳನ್ನು ಸಾಮಾಜಿಕ ಕಾರ್ಯಕರ್ತರು ಮಂಗಳವಾರ ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ರಕ್ಷಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಶಕ್ಕೆ ಒಪ್ಪಿಸಿದ್ದಾರೆ.

ಗಂಭೀರವಾದ ಅನಾರೋಗ್ಯ ಸಮಸ್ಯೆ, ಕಡು ಬಡತನ ಮತ್ತು ಅಲೆಮಾರಿ ಬದುಕಿನ ಕಾರಣದಿಂದ ತಾಯಿ ತನ್ನ ಎರಡರಿಂದ 10 ವರ್ಷದೊಳಗಿನ ಮೂರು ಹೆಣ್ಣು, ಇಬ್ಬರು ಗಂಡು ಮಕ್ಕಳನ್ನು ಸಾಕಲು ಸಾಧ್ಯವಾಗದೆ ರಥಬೀದಿಯಲ್ಲಿ ಬಿಟ್ಟು ಹೋಗುವ ಪ್ರಯತ್ನದಲ್ಲಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸೇವಾಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಈ ಐವರು ಮುಗ್ಧ ಮಕ್ಕಳನ್ನು ರಕ್ಷಿಸಿದ್ದಾರೆ.

ಘಟಕದ ಕಾನೂನು ಪರಿವೀಕ್ಷಣಾ ಅಧಿಕಾರಿ ಪ್ರಭಾಕರ್ ಆಚಾರ್ಯ ಈ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಸಮಿತಿಯ ಸೂಚನೆ ಯಂತೆ ಮಕ್ಕಳಿಗೆ ಕುಂದಾಪುರದ ನಮ್ಮ ಭೂಮಿ ಸಂಸ್ಥೆಯಲ್ಲಿ ಪುನರ್ ವಸತಿ ಕಲ್ಪಿಸಲಾಗಿದೆ. ಮಕ್ಕಳ ತಾಯಿಯನ್ನು ಬಾಗಲಕೋಟೆ ಜಿಲ್ಲೆಯ ಚಿತ್ತವಾಡಗಿಯ ಮಹಿಳೆ ಎಂದು ಗುರುತಿಸಲಾಗಿದೆ. ಇವರು ತನ್ನ ಮಕ್ಕಳನ್ನು ಕಾನೂನಿನ ಕೈಗೆ ಒಪ್ಪಿಸಿ ತನ್ನ ಊರಿಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ.

ಈಕೆಯ ಪತಿ ಅತಿಯಾದ ಮದ್ಯ ಸೇವನೆ ಚಟದಿಂದ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಹಿಳೆ ಹೇಳಿ ಕೊಂಡಿದ್ದಾಳೆ. ಮರಣ ಪೂರ್ವದಲ್ಲಿ ಹೊಲಗದ್ದೆ ಆಸ್ತಿ ಎಲ್ಲವನ್ನು ತನ್ನ ಕುಡಿತದ ಚಟಕ್ಕಾಗಿ ಮಾರಾಟ ಮಾಡಿದ್ದು, ಇವರಿಗೆ ಸೂರಿಲ್ಲದಂತೆ ಮಾಡಿದ್ದಾನೆ.

ಅನಾರೋಗ್ಯದಿಂದ ಬಳಲುತ್ತಿದ್ದ ನನಗೆ ಕೂಲಿ ಮಾಡಿ ಐವರು ಮಕ್ಕಳು ಸಾಕುವುದು ತುಂಬ ಕಷ್ಟವಾಯಿತು. ಹೀಗಾಗಿ ಮಕ್ಕಳನ್ನು ದೇವರೇ ರಕ್ಷಿಸಲೆಂದು ಮಠದ ವಠಾರದಲ್ಲಿ ತ್ಯಜಿಸುವ ನಿರ್ಧಾರ ಮಾಡಿದ್ದೆ ಎಂದು ಮಕ್ಕಳ ತಾಯಿ ತನ್ನ ಅಳಲನ್ನು ಸಮಿತಿಯ ಕಾರ್ಯಕರ್ತರಲ್ಲಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News