ಉಡುಪಿ: ಅಪಘಾತ ನಡೆಸಿದ ಆರೋಪಿಗೆ ಶಿಕ್ಷೆ

Update: 2019-07-16 15:57 GMT

 ಉಡುಪಿ, ಜು.16:ಆರು ವರ್ಷಗಳ ಹಿಂದೆ ಕಲ್ಸಂಕ ಜಂಕ್ಷನ್ ಬಳಿ ಅಪಘಾತ ನಡೆಸಿದ ಆರೋಪಿಗೆ ಉಡುಪಿ ಒಂದನೇ ಹೆಚ್ಚುವರಿ ಜೆಎಂ ಎಫ್‌ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಜುಲೈ 11ರಂದು ಆದೇಶ ನೀಡಿದೆ.

2013ರ ಸೆ.13ರಂದು ಕಲ್ಸಂಕ ಜಂಕ್ಷನ್‌ನಲ್ಲಿ ಅರವಿಂದ ಹೊಳ್ಳ ಎಂಬವರು ತನ್ನ ಹೋಂಡ ಅಕ್ಟೀವಾ ಸ್ಕೂಟರ್‌ಗೆ ವಿಮೆ ಹೊಂದದೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಉಡುಪಿ ಸಿಟಿ ಬಸ್ ನಿಲ್ದಾಣದ ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿದ್ದ ಅಭಿಷೇಕ್ ಶೆಟ್ಟಿ ಎಂಬವರ ಬೈಕ್‌ಗೆ ಢಿಕ್ಕಿ ಹೊಡೆದಿದ್ದರು. ಇದರ ಪರಿಣಾಮ ಅಭಿಷೇಕ್ ಶೆಟ್ಟಿ ರಸ್ತೆಗೆ ಬಿದ್ದು ಗಾಯಗೊಂಡಿರುವುದಲ್ಲದೆ ಆರೋಪಿಯು ಗಾಯಾಳುವಿಗೆ ಚಿಕಿತ್ಸೆ ಕೊಡಿಸದೆ ಮತ್ತು ಪೊಲೀಸರಿಗೆ ಮಾಹಿತಿ ನೀಡದೆ ಹೊರಟು ಹೋಗಿರುವ ಬಗ್ಗೆ ದೂರಲಾಗಿತ್ತು.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯ ಆಗಿನ ಉಪನಿರೀಕ್ಷಕ ಅಮಾನುಲ್ಲಾ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಧೀಶ ಮಂಜುನಾಥ್ ಎಂ. ಎಸ್., ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ 3,000ರೂ. ದಂಡ ವಿಧಿಸಿ, ದಂಡ ಪಾವತಿಸಲು ತಪ್ಪಿದ್ದಲ್ಲಿ 2 ತಿಂಗಳ ಸಜೆ ವಿಧಿಸಿ ಆದೇಶ ನೀಡಿದರು.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಜಯಂತಿ ಕೆ. ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News