ಬೆಂಕಿಯೊಂದಿಗೆ ಅಮೆರಿಕದ ಆಟ: ಇರಾನ್ ಸಚಿವ
Update: 2019-07-16 21:30 IST
ವಿಶ್ವಸಂಸ್ಥೆ, ಜು. 16: ಅಮೆರಿಕವು ಬೆಂಕಿಯೊಂದಿಗೆ ಆಡುತ್ತಿದೆ ಎಂಬುದಾಗಿ ಇರಾನ್ ವಿದೇಶ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಇದೇ ರೀತಿಯ ಎಚ್ಚರಿಕೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅವರು ಈ ತಿರುಗೇಟು ನೀಡಿದ್ದಾರೆ.
ಇರಾನ್‌ನ ಪರಮಾಣು ಕಾರ್ಯಕ್ರಮಗಳ ವಿಷಯದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.
‘‘ಅಮೆರಿಕವು ಬೆಂಕಿಯೊಂದಿಗೆ ಆಡುತ್ತಿದೆ ಎಂದು ನನಗನಿಸುತ್ತದೆ’’ ಎಂದು ಎನ್‌ಬಿಸಿ ನ್ಯೂಸ್ ಜೊತೆ ಮಾತನಾಡಿದ ಶರೀಫ್ ಹೇಳಿದರು.
‘‘ನಾವು ಯುರೇನಿಯಂ ಸಂವರ್ಧನೆಯ ಮಿತಿಯನ್ನು ಮೀರಿದ್ದೇವೆ ಹಾಗೂ ಸಂವರ್ಧಿತ ಯುರೇನಿಯಂನ 300 ಕೆಜಿ ಮಿತಿಯನ್ನೂ ಮೀರಿದ್ದೇವೆ. ಆದರೆ, ಅವುಗಳನ್ನು ಕೆಲವೇ ಗಂಟೆಗಳಲ್ಲಿ ಪೂರ್ವ ಸ್ಥಿತಿಗೆ ತರಬಹುದಾಗಿದೆ’’ ಎಂದರು.