×
Ad

ಕೋಟ ಜೋಡಿ ಕೊಲೆ ಪ್ರಕರಣ: ಆರೋಪಿ ಜಿಪಂ ಸದಸ್ಯನಿಗೆ ಹೈಕೋರ್ಟ್ ಜಾಮೀನು

Update: 2019-07-16 22:38 IST

ಉಡುಪಿ, ಜು.16: ಮಣೂರು ಗ್ರಾಮದ ಚಿಕ್ಕನಕೆರೆ ಜೋಡಿ ಕೊಲೆ ಪ್ರಕರಣದ ಆರೋಪಿ, ಉಡುಪಿ ಜಿಲ್ಲಾ ಪಂಚಾಯತ್ ಕೋಟ ಕ್ಷೇತ್ರ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್ (38)ಗೆ ರಾಜ್ಯ ಹೈಕೋರ್ಟ್ ಶರತ್ತು ಬದ್ಧ ಜಾಮೀನು ನೀಡಿ ಆದೇಶಿಸಿದೆ.

ಇದೇ ವೇಳೆ ಪ್ರಕರಣದ ಇನ್ನೊರ್ವ ಆರೋಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ವೀರೇಂದ್ರ ಆಚಾರ್ಯ(31) ಎಂಬಾತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಈತ ಈ ಹಿಂದೆ ಎರಡು ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿತ್ತು.

ಈ ಪ್ರಕರಣದಲ್ಲಿ ಒಳಸಂಚು ರೂಪಿಸಿದ ಆರೋಪದಡಿ ಫೆ.8ರಂದು ರಾಘ ವೇಂದ್ರ ಕಾಂಚನ್‌ನನ್ನು ಪೊಲೀಸರು ಬಂಧಿಸಿದ್ದರು. ಈತ ಈ ಹಿಂದೆ ಜಾಮೀನು ಕೋರಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯ ಈತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿತ್ತು.

ಇದೀಗ ಮತ್ತೆ ರಾಘವೇಂದ್ರ ಕಾಂಚನ್ ಹೈಕೋರ್ಟ್‌ನಲ್ಲಿ ಎ.4ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಆರೋಪಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದರು. ಆದರೆ ಪೊಲೀಸ್ ಸಿಬ್ಬಂದಿಯಾಗಿ ಕಾನೂನು ಕಾಪಾಡಬೇಕಾದ ಇನ್ನೊರ್ವ ಆರೋಪಿ ವೀರೇಂದ್ರ ಆಚಾರ್ಯ ಆರೋಪಿಗಳೊಂದಿಗೆ ಶಾಮೀಲಾಗಿ ರುವುದರಿಂದ ಆತನಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯ ಮೂರ್ತಿಗಳು ಹೇಳಿದ ಹಿನ್ನೆಲೆಯಲ್ಲಿ ಆರೋಪಿ ಪರ ವಕೀಲರು ಆತನ ಜಾಮೀನು ಅರ್ಜಿ ಯನ್ನು ಹಿಂದಕ್ಕೆ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೌಚಾಲಯ ಹೊಂಡದ ವಿಚಾರದಲ್ಲಿ ಜ. 26ರಂದು ಭರತ್ (30) ಹಾಗೂ ಯತೀಶ್ ಕಾಂಚನ್(25) ಎಂಬವರನ್ನು ತಲವಾರಿನಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 18 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News