ಆರ್ಚರ್ ಸೋದರ ಸಂಬಂಧಿಯ ಸಾವಿನ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ

Update: 2019-07-16 18:55 GMT

ಲಂಡನ್, ಜು. 16: ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೋಫ್ರಾ ಆರ್ಚರ್ ತನ್ನ ತಂಡ ವಿಶ್ವಕಪ್ ಜಯಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸೋದರ ಸಂಬಂಧಿಯ ಸಾವಿನ ಆಘಾತ ಆರ್ಚರ್‌ನ್ನು ಕಾಡಿದ್ದರೂ, ಅವರ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆರ್ಚರ್ ವಿಶ್ವಕಪ್‌ನ 11 ಇನಿಂಗ್ಸ್‌ಗಳಲ್ಲಿ 20 ವಿಕೆಟ್ ಪಡೆದು, ಈ ಬಾರಿ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.

  ಬಾರ್ಬಡಾಸ್ ಮೂಲದ ಆರ್ಚರ್‌ನ ಸೋದರ ಸಂಬಂಧಿ 24ರ ಹರೆಯದ ಅಶಾಂಟಿಯೊ ಬ್ಲಾಕ್‌ಮಾನ್ ಅವರು ಕಳೆದ ಮೇ ತಿಂಗಳಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಇಂಗ್ಲೆಂಡ್ ಗೆಲುವಿನ ಅಭಿಯಾನ ಆರಂಭಿಸಿದ ಮರುದಿನ ಸೈಂಟ್ ಫಿಲಿಪ್‌ನಲ್ಲಿ ತನ್ನ ಮನೆಯ ಹೊರಗಡೆ ಗುಂಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದನು. ಅಶಾಂಟಿಯೊ ಸಾವು ಆರ್ಚರ್‌ಗೆ ಆಘಾತವನ್ನುಂಟು ಮಾಡಿತ್ತು. ‘‘ಅಶಾಂಟಿಯೊ ಮತ್ತು ಆರ್ಚರ್ ತುಂಬಾ ಆತ್ಮೀಯರಾಗಿದ್ದರು. ಇಬ್ಬರು ಒಂದೇ ಪ್ರಾಯದವರು. ಸಾಯುವುದಕ್ಕಿಂತ ಒಂದು ದಿನ ಮೊದಲು ಆತ ಆರ್ಚರ್‌ಗೆ ಸಂದೇಶ ಕಳುಹಿಸಿದ್ದ’’ ಎಂದು ಆರ್ಚರ್ ತಂದೆ ಫ್ರಾಂಕ್ ಟೈಮ್ಸ್ ಪತ್ರಿಕೆಗೆ ತಿಳಿಸಿದ್ದಾರೆ. ಜೋಫ್ರಾ ವೆಸ್ಟ್‌ಇಂಡೀಸ್ ಮೂಲದವರು. ಅವರು ಇಂಗ್ಲೆಂಡ್ ಪರ ಆಡುವ ವಿಚಾರದಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ಹಲವರಿಗೆ ಅಸಮಾಧಾನವಿದೆ. ಆದರೆ ಅವರು ಇಂಗ್ಲೆಂಡ್ ತಂಡದ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಅವರು ಸೂಪರ್ ಓವರ್‌ನಲ್ಲಿ ನ್ಯೂಝಿಲ್ಯಾಂಡ್‌ನ ಆಟಗಾರರಿಗೆ ಗೆಲುವು ದಕ್ಕದಂತೆ ನೋಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News