ಐಸಿಸಿಯ ಮಾಧ್ಯಮ ಹಕ್ಕು ಗುತ್ತಿಗೆಯಿಂದ ಜಿಯೋಸ್ಟಾರ್ ಹಿಂದೆ ಸರಿದಿಲ್ಲ
ಉಭಯ ಸಂಸ್ಥೆಗಳಿಂದ ಜಂಟಿ ಸ್ಪಷ್ಟೀಕರಣ
Photo Credit : Jio Hotstar
ಮುಂಬೈ, ಡಿ. 13: ತಮ್ಮ ನಡುವಿನ ಮಾಧ್ಯಮ ಹಕ್ಕು ಒಪ್ಪಂದವು ಪೂರ್ಣ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ ಹಾಗೂ ಒಪ್ಪಂದ ರದ್ದುಗೊಂಡಿದೆ ಎಂಬ ವರದಿಗಳು ಸುಳ್ಳು ಎಂದು ರಿಲಯನ್ಸ್ ಒಡೆತನದ ಜಿಯೋಸ್ಟಾರ್ ಮತ್ತು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ಪಷ್ಟೀಕರಣ ನೀಡಿವೆ.
ರಿಲಯನ್ಸ್ ನ ಮಾಧ್ಯಮ ಉದ್ಯಮ ಮತ್ತು ಜಾಗತಿಕ ಮಾಧ್ಯಮ ದೈತ್ಯ ವಾಲ್ಟ್ ಡಿಸ್ನಿಯ ಭಾರತೀಯ ವ್ಯವಹಾರ ವಿಲೀನಗೊಂಡು ‘ಜಿಯೋಸ್ಟಾರ್’ ಎಂಬ ಜಂಟಿ ಉದ್ಯಮವಾಗಿದೆ. ವಿಲೀನಕ್ಕೆ ಮುನ್ನ, 2022ರಲ್ಲಿ ವಾಲ್ಟ್ ಡಿಸ್ನಿಯು 2024-27ರ ಅವಧಿಯ ಐಸಿಸಿ ಮಾಧ್ಯಮ ಹಕ್ಕುಗಳನ್ನು ಮೂರು ಬಿಲಿಯ ಡಾಲರ್ (ಸುಮಾರು 27,000 ಕೋಟಿ ರೂಪಾಯಿ)ಗೂ ಅಧಿಕ ಮೊತ್ತಕ್ಕೆ ಖರೀದಿಸಿತ್ತು.
‘‘ಐಸಿಸಿ ಮತ್ತು ಜಿಯೋಸ್ಟಾರ್ ನಡುವಿನ ಹಾಲಿ ಗುತ್ತಿಗೆಯು ಪೂರ್ಣ ಪ್ರಮಾಣದಲ್ಲಿ ಚಾಲ್ತಿಯಲ್ಲಿದೆ ಹಾಗೂ ಭಾರತದಲ್ಲಿ ಐಸಿಸಿಯ ಅಧಿಕೃತ ಮಾಧ್ಯಮ ಹಕ್ಕು ಪಾಲುದಾರನಾಗಿ ಜಿಯೋಸ್ಟಾರ್ ಮುಂದುವರಿಯಲಿದೆ. ಈ ಗುತ್ತಿಗೆಯಿಂದ ಜಿಯೋಸ್ಟಾರ್ ಹಿಂದೆ ಸರಿದಿದೆ ಎನ್ನುವ ಯಾವುದೇ ವರದಿಯು ಸತ್ಯವಲ್ಲ’’ ಎಂದು ಜಿಯೋಸ್ಟಾರ್ ಮತ್ತು ಐಸಿಸಿ ಶುಕ್ರವಾರ ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭಾರೀ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ, ಗುತ್ತಿಗೆಯ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳು ಇರುವಂತೆಯೇ ಐಸಿಸಿ ಮಾಧ್ಯಮ ಹಕ್ಕುಗಳ ಗುತ್ತಿಗೆಯಿಂದ ಜಿಯೋಸ್ಟಾರ್ ಹಿಂದೆ ಸರಿದಿದೆ ಎಂಬ ವರದಿಯೊಂದು ‘ದ ಎಕನಾನಿಕ್ ಟೈಮ್ಸ್’ನಲ್ಲಿ ಪ್ರಕಟಗೊಂಡ ಬಳಿಕ ಈ ಹೇಳಿಕೆ ಹೊರಬಿದ್ದಿದೆ.