ಇಲಿಗಳನ್ನು ತಿಂದು ಹಸಿವು ನೀಗಿಸುತ್ತಿರುವ ನೆರೆ ಸಂತ್ರಸ್ತರು !

Update: 2019-07-17 10:41 GMT

ಪಾಟ್ನಾ : ಆಡಳಿತದಿಂದ ಆಹಾರ ಅಥವಾ ಪರಿಹಾರ ಸಾಮಗ್ರಿ ದೊರೆಯದೆ ಬಿಹಾರದ ಕಟಿಹಾರ್ ಜಿಲ್ಲೆಯ ಬಡ ನೆರೆ ಸಂತ್ರಸ್ತರು ಹಸಿವು ನೀಗಿಸಲು ಅನಿವಾರ್ಯವಾಗಿ ಇಲಿಗಳನ್ನು ತಿನ್ನುತ್ತಿರುವ ಆಘಾತಕಾರಿ ಮಾಹಿತಿ ಬಯಲುಗೊಂಡಿದೆ. ಆದರೆ ನೆರೆ ಸಂತ್ರಸ್ತರಿಗೆ ಆಹಾರ ಒದಗಿಸಲು ಸಮುದಾಯ ಪಾಕಶಾಲೆಗಳು ಕಾರ್ಯಾಚರಿಸುತ್ತಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿಕೊಂಡಿದ್ದಾರೆ.

''ನಮ್ಮ ಮನೆ ನೆರೆ ನೀರಿನಲ್ಲಿ ಆವೃತವಾಗಿರುವುದರಿಂದ ರಸ್ತೆ ಬದಿಗಳಲ್ಲಿ ಆಶ್ರಯ ಪಡೆಯುವಂತಾಗಿದೆ. ನಮ್ಮ ಪುತ್ರರು ಹಾಗೂ ಮೊಮ್ಮಕ್ಕಳು ಹತ್ತಿರದ ಸ್ಥಳಗಳಿಂದ ಹಿಡಿದು ತಂದ ಇಲಿಗಳನ್ನು ತಿಂದು ನಾವು ಬದುಕುತ್ತಿದ್ದೇವೆ,'' ಎಂದು ಕಟಿಹಾರ್ ಜಿಲ್ಲೆಯ ಕಡ್ವಾ ಬ್ಲಾಕ್ ನ ಡಂಗಿ ತೊಲ ಪ್ರದೇಶದ ನಿವಾಸಿ ತಲಾ ಮುರ್ಮು (55) ಹೇಳುತ್ತಾರೆ.

ಈ ಪ್ರದೇಶದಲ್ಲಿ ವಾಸಿಸುವ ಸುಮಾರು 300 ಕುಟುಂಬಗಳು ಕೂಡ ತಮಗೆ ಯಾವುದೇ ಪರಿಹಾರ ಸಾಮಗ್ರಿ ದೊರಕಿಲ್ಲ, ಇಲಿಗಳನ್ನು ತಿಂದು ಬದುಕುವಂತಾಗಿದೆ ಎಂದು ದೂರಿದ್ದಾರೆ. ಇಲ್ಲಿನ ನಿವಾಸಿಗಳು ಮಹಾದಲಿತ್ ಹಾಗೂ ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿದ್ದಾರೆ.

ಆದರೆ ಈ ಬಗ್ಗೆ ತಮಗೆ ತಿಳಿದಿಲ್ಲ, ಈ ವಿಚಾರ ಪರಿಶೀಲಿಸುವುದಾಗಿ ಕಟಿಹಾರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಪೂನಮ್ ಹೇಳಿದ್ದಾರೆ. ಸಮುದಾಯ ಪಾಕಶಾಲೆಗಳು ಸಂತ್ರಸ್ತರು ಆಶ್ರಯ ಪಡೆದಿರುವ 11 ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News