ಮುಂಬೈ ಕಟ್ಟಡ ದುರಂತ: ಯುವತಿಯನ್ನು ರಕ್ಷಿಸಿದ ಆಕೆಯ ಚಿನ್ನದುಂಗುರ!

Update: 2019-07-17 11:45 GMT
Photo: inshorts

ಮುಂಬೈ: ಮುಂಬೈ ಮಹಾನಗರಿಯ ತೀರಾ ಇಕ್ಕಟ್ಟಾದ ಡೋಂಗ್ರಿ ಪ್ರದೇಶದ ಸುಮಾರು 100 ವರ್ಷ ಹಳೆಯ ನಾಲ್ಕು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಇಲ್ಲಿಯ ತನಕ ಕನಿಷ್ಠ 14 ಮಂದಿ ಸಾವಿಗೀಡಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿಯಿಂದ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರಿದಿರುವಂತೆಯೇ ಚಿನ್ನದ ಉಂಗುರವೊಂದು ಯುವತಿಯ ಪ್ರಾಣವನ್ನು ರಕ್ಷಿಸಲು ನೆರವಾದ ಒಂದು ವಿದ್ಯಮಾನವೂ ನಡೆದಿದೆ.

ಅವಶೇಷಗಳಡಿಯಲ್ಲಿ ಸಿಲುಕಿದ್ದ ಝೀನತ್ ರೆಹ್ಮಾನ್ ಸಲ್ಮಾನಿ ಎಂಬ 23 ವರ್ಷದ ಯುವತಿಯನ್ನು ಅಗ್ನಿ ಶಾಮಕ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗಳಿಗೂ ಹೆಚ್ಚು ಸಮಯ ತಗಲಿದ ಕಾರ್ಯಾಚರಣೆಯಲ್ಲಿ ರಕ್ಷಿಸಿದ್ದಾರೆ. ಎರಡು ಗಂಟೆಗಳಿಗೂ ಹೆಚ್ಚು ಸಮಯ ಅವಶೇಷಗಳಡಿ ಆಕೆ ಸಿಲುಕಿಕೊಂಡಿದ್ದರು, ಅಲ್ಲೇ ಪಕ್ಕದಲ್ಲಿ ಅವಶೇಷಗಳಡಿಯಲ್ಲಿದ್ದ ಮಗುವೊಂದನ್ನು ರಕ್ಷಿಸಿದ ಕಾರ್ಯಕರ್ತರು ಇನ್ನೇನು ಹಿಂದೆ ಹೋಗಬೇಕೆನ್ನುವಷ್ಟರಲ್ಲಿ ಅವರ ಕಣ್ಣಿಗೆ ಚಿನ್ನದ ಉಂಗುರದ ಹೊಳಪೊಂದು ನಾಟಿತ್ತು. ಅದಲ್ಲದೇ ಹೋಗಿದ್ದರೆ ಅವರು ರೆಹ್ಮಾನ್ ಸಲ್ಮನಿಯನ್ನು ರಕ್ಷಿಸುವ ಸಾಧ್ಯತೆಯಿರಲಿಲ್ಲ.

ಆಕೆಯ ಕೈಬೆರಳಿನಲ್ಲಿದ್ದ ಉಂಗುರ ರಕ್ಷಣಾ ಕಾರ್ಯಕರ್ತರ ಕಣ್ಣಿಗೆ ಬಿದ್ದಿದ್ದೇ ತಡ ಆಕೆಯನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಗೊಂಡಿತ್ತು. ಕಬ್ಬಿಣದ ಬೀಮುಗಳು, ಮರದ ಬಾಗಿಲುಗಳು ಹಾಗೂ ಎಲ್‍ಪಿಜಿ ಸಿಲಿಂಡರ್ ನಡುವೆ ಆಕೆ ಸಿಲುಕಿದ್ದರು.  ಹೈಡ್ರಾಲಿಕ್ ಕಟ್ಟರ್ ಮೂಲಕ ಕಬ್ಬಿನದ ಬೀಮುಗಳು ಮತ್ತಿತರ ಅವಶೇಷಗಳನ್ನು ತುಂಡರಿಸಿ ಕೊನೆಗೂ ಆಕೆಯನ್ನು ರಕ್ಷಿಸಲಾಯಿತು. ಕಾರ್ಯಾಚರಣೆಯುದ್ದಕ್ಕೂ ಆಕೆಗೆ ನೀರು ನೀಡಿ ಆಕೆಯ ಜತೆ ರಕ್ಷಣಾ ಕಾರ್ಯಕರ್ತರು ಮಾತನಾಡುತ್ತಲೇ ಇದ್ದರು. ಈ ಕಟ್ಟಡ ಕುಸಿತ ಘಟನೆಯಲ್ಲಿ ರಕ್ಷಣಾ ಕಾರ್ಯಕರ್ತರಿಗೆ ರೆಹ್ಮಾನ್ ಸಲ್ಮಾನಿಯನ್ನು ರಕ್ಷಿಸುವಲ್ಲಿ ಎದುರಾದಷ್ಟು ಸವಾಲು ಇತರರನ್ನು ರಕ್ಷಿಸುವಲ್ಲಿ ಎದುರಾಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News