ಉತ್ತರ ಪ್ರದೇಶ: 9 ಮಂದಿಯ ಗುಂಡಿಕ್ಕಿ ಹತ್ಯೆ; 19 ಮಂದಿಗೆ ಗಾಯ

Update: 2019-07-17 12:03 GMT

ಲಕ್ನೋ: ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಘೋರವಾಲ್ ಗ್ರಾಮದಲ್ಲಿ ಬುಧವಾರ ನಡೆದ ಆಘಾತಕಾರಿ ಘಟನೆಯಲ್ಲಿ ಭೂ ವಿವಾದವೊಂದರ ಸಂಬಂಧ ಒಂಬತ್ತು ಮಂದಿಯನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದ್ದರೆ ಕನಿಷ್ಠ 19 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಮೃತರಲ್ಲಿ ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಘಟನೆ ಸಂಬಂಧ ಇಲ್ಲಿಯ ತನಕ ಇಬ್ಬರನ್ನು ಬಂಧಿಸಲಾಗಿದೆ.

ವಿರೋಧ ಹಾಗೂ ಎಚ್ಚರಿಕೆಯ ಹೊರತಾಗಿಯೂ ವಿವಾದಿತ ಗದ್ದೆಯಲ್ಲಿ ಉಳುಮೆಗಾಗಿ ಕೆಲ ಮಂದಿ ಬಂದಿದ್ದರು. ಗ್ರಾಮದ ಮುಖ್ಯಸ್ಥ ಆರೋಪಿಗಳಲ್ಲೊಬ್ಬನೆಂದು ಹೇಳಲಾಗಿದ್ದರೂ ಈ ವಿಚಾರ ಇನ್ನೂ ದೃಢಪಟ್ಟಿಲ್ಲ. ಈ ಗ್ರಾಮದ ಮುಖ್ಯಸ್ಥ ಐಎಎಸ್ ಅಧಿಕಾರಿಯೊಬ್ಬರಿಂದ ಖರೀದಿಸಿದ್ದ 90 ಬಿಘಾ ಜಮೀನು ವಿವಾದದ ಕೇಂದ್ರ ಬಿಂದು ಎಂದು ಹೇಳಲಾಗಿದೆ. ಗ್ರಾಮದ ಮುಖ್ಯಸ್ಥ ತಾನು ಖರೀದಿಸಿದ್ದ ಜಮೀನಿನಲ್ಲಿ ಕೆಲಸ ಆರಂಭಿಸಿದಾಗ ಕೆಲ ಗ್ರಾಮಸ್ಥರು ವಿರೋಧಿಸಿದ್ದರಿಂದ ಸಂಘರ್ಷಮಯ ಸ್ಥಿತಿ ಉಂಟಾಗಿ ಹಲವರಿಗೆ ಗುಂಡಿಕ್ಕಲಾಗಿತ್ತು. ಘಟನೆ ಸಂಬಂಧ ಗ್ರಾಮದ ಮುಖ್ಯಸ್ಥನ ಸೋದರಳಿಯಂದಿರಾದ ಗಣೇಶ್ ಹಾಗೂ ವಿಮಲೇಶ್ ಎಂಬವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಈ ಘಟನೆಯ ಕುರಿತಂತೆ ಟ್ವೀಟ್ ಮಾಡಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಈ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸುವಂತೆಯೂ ಅವರು ಡಿಜಿಪಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News