ಒನ್ ಸ್ಟಾಪ್ ಸರ್ವೀಸ್ ಸೆಂಟರ್‌ಗೆ ಚಾಲನೆ

Update: 2019-07-17 12:32 GMT

ಮಂಗಳೂರು, ಜು.17: ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆ ಹಾಗೂ ಭದ್ರತೆ, ವೈದ್ಯಕೀಯ, ಕಾನೂನು ಸಲಹೆ, ಕೌನ್ಸಿಲಿಂಗ್ ಮೊದಲಾದ ಸೇವೆಗಳನ್ನು ಒಂದೇ ಸೂರಿನಲ್ಲಿ ನೀಡುವ ನಿಟ್ಟಿನಲ್ಲಿ ‘ಒನ್ ಸ್ಟಾಪ್ ಸರ್ವೀಸ್ ಸೆಂಟರ್’ನ್ನು ಪಾಂಡೇಶ್ವರ ಮಹಿಳಾ ಠಾಣೆ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಎಸ್ಸೈ ಸತ್ಯಾವತಿ ಹಾಗೂ ಕಾನ್‌ಸ್ಟೇಬಲ್ ಯೋಗೇಶ್ವರಿ ಜಂಟಿಯಾಗಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಈವರೆಗೆ ಕೌಟುಂಬಿಕ, ಸಾಮಾಜಿಕವಾಗಿ ದೌರ್ಜನ್ಯಕ್ಕೊಳಗಾಗುವ ಮಹಿಳೆಯರಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮಾತ್ರ ಅವಕಾಶವಿತ್ತು. ಆದರೆ ಇನ್ನು ಪ್ರಕರಣ ದಾಖಲಿನೊಂದಿಗೆ ವೈದ್ಯಕೀಯ ಸೇವೆ, ಕಾನೂನು ಸಲಹೆ, ಆಪ್ತ ಸಮಾಲೋಚನೆ ಸೇವೆ ಕೂಡಾ ಲಭ್ಯವಾಗಲಿದೆ. ಅದಕ್ಕಾಗಿ ಒನ್ ಸ್ಟಾಪ್ ಸರ್ವೀಸ್ ಸೆಂಟರ್‌ನ್ನು ಆರಂಭಿಸಲಾಗಿದೆ. ಶೀಘ್ರ ವಕೀಲರು ಮತ್ತು ವೈದ್ಯರನ್ನು ಈ ಸೆಂಟರ್‌ಗೆ ನೇಮಕ ಮಾಡಲಾಗುವುದು ಎಂದರು.

ಪ್ರಸ್ತುತ ಈ ಸೆಂಟರ್ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮಹಿಳಾ ಠಾಣೆ ಹಿಂಭಾಗ ನೂತನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕಿ ಡಾ. ಸವಿತಾ ಮುಖ್ಯ ಅತಿಥಿಯಾಗಿದ್ದರು. ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಮಂಜುನಾಥ ಶೆಟ್ಟಿ, ಭಾಸ್ಕರ ಒಕ್ಕಲಿಗ, ಪಾಂಡೇಶ್ವರ ಇನ್‌ಸ್ಪೆಕ್ಟರ್ (ಪ್ರಭಾರ)ಮುಹಮ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News