ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ರಮ ಆಯೋಜನೆ: ದೇಶದ್ರೋಹದ ಪ್ರಕರಣ ದಾಖಲಿಸಲು ಎಸ್‌ಡಿಪಿಐ ಒತ್ತಾಯ

Update: 2019-07-17 12:35 GMT

ಮಂಗಳೂರು, ಜು.17:ದೇಶಾದ್ಯಂತ ಹಲವಾರು ಬಾಂಬ್‌ಸ್ಫೋಟ ಪ್ರಕರಣಗಳಲ್ಲಿ ಮತ್ತು ವಿಚಾರವಾದಿಗಳ ಹತ್ಯೆಯಲ್ಲಿ ಬಾಗಿಯಾಗಿರುವ ಸನಾತನ ಸಂಸ್ಥೆಯ ಹೆಸರಿನಲ್ಲಿ ಗುರುಪೂರ್ಣ ಮಹೋತ್ಸವದ ಅಂಗವಾಗಿ ಹಿಂದು ರಾಷ್ಟ್ರ ಸ್ಥಾಪನೆಯ ಭಾಗವಾಗಿ ನಗರದ ಎಸ್‌ಡಿಎಂ ಲಾ ಕಾಲೇಜಿನಲ್ಲಿ ಅಯೋಜಿಸಿದ ಕಾರ್ಯಕ್ರಮವು ಸಂವಿಧಾನಕ್ಕೆ ವಿರುದ್ಧವಾದ ಮತ್ತು ದೇಶಕ್ಕೆ ಮಾರಕವಾದ ಕಾರ್ಯಕ್ರಮವಾಗಿದೆ ಎಂದು ಆಪಾಸಿದಿಸಿದ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯು, ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲು ಆಗ್ರಹಿಸಿದೆ.

ಭಾರತವು ಪ್ರಜಾಪ್ರಭುತ್ವ, ಜಾತ್ಯತೀತ ಮೌಲ್ಯ ಇರುವಂತಹ ಮತ್ತು ಎಲ್ಲಾ ಧರ್ಮ ಜಾತಿ ಪಂಗಡದ ಆಚಾರ ವಿಚಾರ ಒಳಗೊಂಡಂತಹ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ. ಈ ದೇಶದಲ್ಲಿ ಯಾವುದೇ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರವನ್ನು ರಚಿಸಲು ಸಂವಿಧಾನ ಅವಕಾಶ ಕಲ್ಪಿಸುವುದಿಲ್ಲ. ಆದರೆ ಗುರುಪೂರ್ಣ ಮಹೋತ್ಸವದ ಭಾಗವಾಗಿ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ, ಜಾತ್ಯತೀತ ವ್ಯವಸ್ಥೆಗೆ ವಿರುದ್ಧವಾಗಿ ಪ್ರಜಾಪ್ರಭುತ್ವ ರಾಷ್ಟ್ರವನ್ನು ಹಿಂದು ರಾಷ್ಟ್ರ ಮಾಡಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ನಡೆಸಲಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣ ಕಾರ್ಯಕ್ರಮ ಆಯೋಜಿಸಿದವರ ಮೇಲೆ ಮತ್ತು ಇದಕ್ಕೆ ಸ್ಥಳವಕಾಶ ಮಾಡಿಕೊಟ್ಟ ಎಸ್‌ಡಿಎಂ ಲಾ ಕಾಲೇಜ್‌ನ ಆಡಳಿತ ಮಂಡಳಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಮೊದಲ ಬಾರಿಯ ಕಾರ್ಯಕ್ರಮ ಇದಲ್ಲ. ಕೆಲವು ತಿಂಗಳ ಹಿಂದೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹಿಂದು ರಾಷ್ಟ ಸ್ಥಾಪನೆಯ ಕಾರ್ಯಕ್ರಮದ ಭಿತ್ತಿಪತ್ರ ಅಂಟಿಸಿದ್ದ ಸಂದರ್ಭ ಎಸ್‌ಡಿಪಿಐ ನಿಯೋಗ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಭೇಟಿಯಾಗಿ ಸನಾತನ ಸಂಸ್ಥೆಯ ದೇಶ ವಿರೋಧಿ ಕಾರ್ಯಕ್ರಮದ ಬಗ್ಗೆ ಗಮನ ಸೆಳೆದಿತ್ತು. ಆದರೆ ಜಿಲ್ಲಾಡಳಿತದ ನಿರ್ಲಕ್ಷತನದಿಂದ ಮತ್ತೆ ಇದು ಮರುಕಳಿಸಿದೆ. ದೇಶ ಮತ್ತು ರಾಜ್ಯದಲ್ಲಿ ನಡೆದ ವಿಚಾರವಾದಿಗಳ ಹತ್ಯೆ ನಡೆಸಿದ ಸನಾತನ ಸಂಸ್ಥೆಯ ಕಾರ್ಯಕರ್ತರು ಶಸ್ತ್ರಾಸ್ತ್ರ ತರಬೇತಿಯನ್ನು ಪಡೆದದ್ದು ಕೂಡ ದ.ಕ. ಜಿಲ್ಲೆಯಲ್ಲಿ ಎಂಬುದು ತನಿಖೆಯಿಂದ ಬಹಿರಂಗಗೊಳ್ಳುತ್ತಿರುವಾಗ ಇಂತಹ ದೇಶ ವಿರೋಧಿ ಸಂಘಟನೆಗಳಿಗೆ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಿದ್ದು ಹೇಗೆ? ಎಂದು ಪ್ರಶ್ನಿಸಿರುವ ಎಸ್‌ಡಿಪಿಐ ಈ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News