ಕೊಳಂಬೆ ಅಕ್ರಮ ಕಲ್ಲುಗಣಿಗಾರಿಕೆ ಗುತ್ತಿಗೆ ರದ್ದು: ಗಣಿ, ಭೂ ವಿಜ್ಞಾನ ಇಲಾಖೆಯ ಡಿಡಿ ಆದೇಶ

Update: 2019-07-17 12:39 GMT

ಬಜ್ಪೆ, ಜು.17: ಮಂಗಳೂರು ತಾಲೂಕಿನ ಕೊಳಂಬೆ ಗ್ರಾಮದ ಸರ್ವೆ ನಂಬ್ರ 248/5ರ 1 ಎಕರೆ ಪ್ರದೇಶದಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ ಮಂಜೂರಾಗಿರುವ ಗುತ್ತಿಗೆಯನ್ನು ರದ್ದುಪಡಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಕಚೇರಿಯು ಆದೇಶಿಸಿದೆ.

ಕಾವೂರಿನ ಚಂದ್ರಹಾಸ ಟಿ. ಅಮೀನ್‌ಗೆ 2015ರಲ್ಲಿ ಕೊಳಂಬೆಯಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆಗೆ 20 ವರ್ಷಗಳ ಕಲ್ಲುಗಣಿ ಗುತ್ತಿಗೆ ಮಂಜೂರಾಗಿತ್ತು. ಇಲ್ಲಿ ಅಕ್ರಮ ಹಾಗೂ ವಾಸ್ತವ್ಯಕ್ಕೆ ಭೀತಿ ಹುಟ್ಟಿಸುವ ರೀತಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರಿಂದ ದೂರು ಬಂದ ಕಾರಣ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಾ.10ರಂದು ಡ್ರೋನ್ ಮೂಲಕ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ 1 ಎಕರೆ ಪ್ರದೇಶದ ಜೊತೆಗೆ ಹತ್ತಿರದ 3.62 ಎಕರೆ ಜಾಗದಲ್ಲೂ ಕಲ್ಲು ಗಣಿಗಾರಿಕೆ ಮಾಡಿ ಒಟ್ಟು 629106.40 ಮೆಟ್ರಿಕ್ ಟನ್ ಉಪಖನಿಜ ಉತ್ಖನನ ಮಾಡಿರುವುದು ಪತ್ತೆಯಾಗಿದೆ. ಅತಿಕ್ರಮಣ ಮಾಡಲಾದ ಜಾಗದಿಂದ 419021.20 ಮೆಟ್ರಿಕ್ ಟನ್ ಉಪಖನಿಜ ಉತ್ಖನನ ಮಾಡಲಾಗಿದೆ. ಇದರಿಂದ ಕರ್ನಾಟಕ ಉಪಖನಿಜ ನಿಯಾಮಾವಳಿ 1994ರ ತಿದ್ದುಪಡಿ (2016ರ) 42, 44ರ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಇಲಾಖೆ ಮಾಹಿತಿ ಕಲೆ ಹಾಕಿತ್ತು.

ಅಕ್ರಮ ಗಣಿಗಾರಿಕೆ ನಡೆಸಿದ ಹಿನ್ನಲೆಯಲ್ಲಿ ಸರಕಾರಕ್ಕೆ 12,57,06360 ರೂ. ದಂಡ ಪಾವತಿಸುವಂತೆ ಚಂದ್ರಹಾಸ ಅಮೀನ್‌ಗೆ ನೋಟಿಸ್ ಜಾರಿ ಮಾಡಲಾಗಿದ್ದರೂ, ದಂಡ ಮೊತ್ತ ಪಾವತಿಸಿಲ್ಲ. ಆ ಹಿನ್ನಲೆಯಲ್ಲಿ ಆರನೇ ಜೆಎಂಸಿಎಫ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಕಲ್ಲು ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಜು.4ರಂದು ಕಚೇರಿಯಲ್ಲಿ ನಡೆದ ವಿಚಾರಣೆಗೆ ಅಮೀನ್ ತನ್ನ ವಕೀಲರೊಂದಿಗೆ ಹಾಜರಾಗಿಲ್ಲ. ಹಾಗಾಗಿ ಇಲಾಖೆಯ ಉಪನಿರ್ದೇಶಕಿ ಪದ್ಮಾಶ್ರೀ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಚಂದ್ರಹಾಸ ಅಮೀನರ ಕಲ್ಲು ಗಣಿ ಗುತ್ತಿಗೆ ಸಂಖ್ಯೆ ಡಿಕೆಡಿ-341ನ್ನು ತಕ್ಷಣದಿಂದ ಅನ್ವಯವಾಗುವಂತೆ ರದ್ದುಪಡಿಸಿ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News