Breaking News: ಕುಲಭೂಷಣ್ ಜಾಧವ್ ಮರಣದಂಡನೆ ಶಿಕ್ಷೆಗೆ ತಡೆ ಹೇರಿದ ಅಂತರ್‌ರಾಷ್ಟ್ರೀಯ ನ್ಯಾಯಾಲಯ

Update: 2019-07-17 15:37 GMT

ಹೊಸದಿಲ್ಲಿ,ಜು.17: ಪಾಕಿಸ್ತಾನದಿಂದ ಬೇಹುಗಾರಿಕೆ ಆರೋಪ ಹೊರಿಸಲ್ಪಟ್ಟಿರುವ ಭಾರತದ ನಿವೃತ್ತ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಮರಣ ದಂಡನೆಗೆ ಬುಧವಾರ ತಡೆಯಾಜ್ಞೆಯನ್ನು ನೀಡಿರುವ ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯವು,ಅವರ ದೋಷನಿರ್ಣಯವನ್ನು ಪರಿಣಾಮಕಾರಿಯಾಗಿ ಪುನರ್‌ಪರಿಶೀಲಿಸುವಂತೆ ಮತ್ತು ಪುನರ್‌ಪರಿಗಣಿಸುವಂತೆ ಪಾಕಿಸ್ತಾನಕ್ಕೆ ನಿರ್ದೇಶಿಸಿದೆ. ಅಲ್ಲಿಯವರೆಗೆ ಜಾಧವ್ ಅವರ ಮರಣ ದಂಡನೆ ಅಮಾನತಿನಲ್ಲಿರುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.

 ಬಹಿರಂಗ ಬೈಠಕ್‌ನಲ್ಲಿ ಭಾರತದ ಪರವಾಗಿ ತೀರ್ಪನ್ನು ಪ್ರಕಟಿಸಿದ ನ್ಯಾಯಾಲಯವು ಜಾಧವ್ ಅವರು ರಾಜತಾಂತ್ರಿಕ ನೆರವನ್ನು ಪಡೆಯಲು ಅವಕಾಶ ಕಲ್ಪಿಸಿದೆ. ಪೀಠದಲ್ಲಿದ್ದ 16 ನ್ಯಾಯಾಧೀಶರ ಪೈಕಿ 15 ಜನರು ಭಾರತದ ಪರವಾಗಿ ತೀರ್ಪು ನೀಡಿದ್ದರು. ಆದರೆ ಜಾಧವ್ ಅವರನ್ನು ದೋಷನಿರ್ಣಯಕ್ಕೆ ಒಳಪಡಿಸಿರುವ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದ ತೀರ್ಪಿನ ರದ್ದತಿ,ಅವರ ಬಿಡುಗಡೆ ಮತ್ತು ಸ್ವದೇಶಕ್ಕೆ ಸುರಕ್ಷಿತವಾಗಿ ಮರಳುವಿಕೆ ಸೇರಿದಂತೆ ಭಾರತವು ಕೋರಿದ್ದ ಹೆಚ್ಚಿನ ಪರಿಹಾರಗಳನ್ನು ನ್ಯಾಯಾಲಯವು ತಿರಸ್ಕರಿಸಿದೆ.

 ಬಲವಂತದ ತಪ್ಪೊಪ್ಪಿಗೆಯ ಆಧಾರದಲ್ಲಿ ಜಾಧವ್ ಅವರ ‘ವಿಚಾರಣೆ ಪ್ರಹಸನ ’ವನ್ನು ಪ್ರಶ್ನಿಸಿದ್ದ ಭಾರತವು,ಶಿಕ್ಷೆಯನ್ನು ರದ್ದುಗೊಳಿಸುವಂತೆ ಮತ್ತು ಭಾರತದ ರಾಜತಾಂತ್ರಿಕ ನೆರವಿಗೆ ಅವಕಾಶ ನೀಡುವಂತೆ ಪಾಕಿಸ್ತಾನಕ್ಕೆ ಆದೇಶಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಕೋರಿಕೊಂಡಿತ್ತು.

2016,ಮಾರ್ಚ್‌ನಲ್ಲಿ ಜಾಧವ್ (49)ರನ್ನು ಬಂಧಿಸಿದ್ದ ಪಾಕಿಸ್ತಾನವು ಅವರ ಮೇಲೆ ಬೇಹುಗಾರಿಕೆ ಆರೋಪವನ್ನು ಹೊರಿಸಿತ್ತು. ಈ ಆರೋಪವನ್ನು ಭಾರತವು ತಳ್ಳಿಹಾಕಿತ್ತು. ಒಂದು ವರ್ಷದ ಬಳಿಕ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಅವರಿಗೆ ಮರಣ ದಂಡನೆಯನ್ನು ವಿಧಿಸಿತ್ತು. ಒಂದು ತಿಂಗಳ ಬಳಿಕ ಭಾರತವು ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಎಳೆದಿತ್ತು ಮತ್ತು ಮೇ,2017ರಲ್ಲಿ ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಲಾಗಿತ್ತು.

 ಇರಾನ್‌ನಿಂದ ತನ್ನ ದೇಶವನ್ನು ಪ್ರವೇಶಿಸಿದ್ದ ಜಾಧವ್ ಅವರನ್ನು 2016,ಮಾ.3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿ ತನ್ನ ಭದ್ರತಾ ಪಡೆಗಳು ಬಂಧಿಸಿದ್ದವು ಎಂದು ಪಾಕಿಸ್ತಾನವು ಹೇಳಿಕೊಂಡಿತ್ತು.

ಜಾಧವ್ ಅವರು ನೌಕಾಪಡೆಯಿಂದ ನಿವೃತ್ತಗೊಂಡ ಬಳಿಕ ಇರಾನ್‌ನಲ್ಲಿ ಉದ್ಯಮಾಸಕ್ತಿಗಳನ್ನು ಹೊಂದಿದ್ದರು ಮತ್ತು ಅಲ್ಲಿಂದ ಅವರನ್ನು ಅಪಹರಿಸಲಾಗಿತ್ತು ಎಂದು ಭಾರತವು ಆರೋಪಿಸಿತ್ತು.

ಪಾಕಿಸ್ತಾನವು ಜಾಧವ್ ಅವರಿಗೆ ರಾಜತಾಂತ್ರಿಕ ನೆರವನ್ನು ನಿರಾಕರಿಸುವ ಮೂಲಕ ವಿಯೆನ್ನಾ ನಿರ್ಣಯವನ್ನು ಉಲ್ಲಂಘಿಸಿದೆ ಎಂಂದು ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News