ಮಂಗಳೂರು: ಕೋರ್ಟ್ ಆವರಣದಲ್ಲಿದ್ದ ರಕ್ತದ ಕಲೆಗೆ ತಾರ್ಕಿಕ ಅಂತ್ಯ

Update: 2019-07-17 15:41 GMT

ಮಂಗಳೂರು, ಜು.17: ದ.ಕ. ಜಿಲ್ಲಾ ನ್ಯಾಯಾಲಯದ ಪಾರ್ಕಿಂಗ್ ಪ್ರದೇಶದಲ್ಲಿ ಜು.12ರಂದು ಪತ್ತೆಯಾಗಿದ್ದ ರಕ್ತದ ಕಲೆಗೆ ಬುಧವಾರ ಬಂದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ತಾರ್ಕಿಕ ಅಂತ್ಯ ಸಿಕ್ಕಿದೆ.

ಕಸ ಗುಡಿಸುವವರು ನ್ಯಾಯಾಲಯದ ಎದುರು ಪ್ರವೇಶ ದ್ವಾರದ ಬಳಿ ಇರುವ ವಾಹನ ಪಾರ್ಕಿಂಗ್ ಸ್ಥಳದಲ್ಲಿ ರಕ್ತ ಚೆಲ್ಲಿರುವುದನ್ನು ಜು.12ರಂದು ಮಧ್ಯಾಹ್ನ 2:30ರ ಸುಮಾರು ನೋಡಿದ್ದರು. ಬಳಿಕ ಸ್ಥಳೀಯರಿಗೂ ಈ ಬಗ್ಗೆ ಅನುಮಾನ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಕೀಲರೋರ್ವರ ಸ್ಕಾರ್ಪಿಯೋ ವಾಹನದ ಮೇಲೂ ರಕ್ತ ಎರಚಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಾತ್ರವಲ್ಲದೆ, ಸುತ್ತಮುತ್ತದ ಸುಮಾರು 30 ಮೀಟರ್ ದೂರದಲ್ಲೂ ರಕ್ತದ ಕಲೆ ಕಂಡುಬಂದಿತ್ತು.

ನಿಗೂಢವಾಗಿತ್ತು: ಘಟನೆ ಏನು ನಡೆದಿದೆ ಎಂಬುದಕ್ಕೆ ಪ್ರತ್ಯಕ್ಷದರ್ಶಿಗಳು ಯಾರೂ ಇರಲಿಲ್ಲ. ಮಂಗಳೂರು ಉತ್ತರ (ಬಂದರು) ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಈ ಬಗ್ಗೆ ಅಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆ ಸ್ಥಳ ಕ್ಯಾಮರಾ ವ್ಯಾಪ್ತಿಗೆ ಬರುತ್ತಿರಲಿಲ್ಲ. ಹಾಗಾಗಿ ಪ್ರಕರಣ ನಿಗೂಢವಾಗಿತ್ತು.

ವಿವಿಧ ಆಯಾಮದಲ್ಲಿ ತನಿಖೆ: ನ್ಯಾಯಾಲಯಕ್ಕೆ ವಿಚಾರಣೆಗೆ ಬಂದ ಎರಡು ತಂಡಗಳ ನಡುವೆ ಪರಸ್ಪರ ಘರ್ಷಣೆ ನಡೆದು ತಲವಾರು ದಾಳಿ ನಡೆದಿರಬೇಕು ಎನ್ನುವ ಊಹಾಪೋಹ ಹರಡಿತ್ತು. ಪೊಲೀಸರು ಕೂಡ ಸಂಜೆ ತನಕ ಅಲ್ಲಿಯೇ ನಿಂತು ವಿವಿಧ ಕೋನಗಳಲ್ಲಿ ತನಿಖೆ ನಡೆಸಿದ್ದರು. ಈ ನಡುವೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ರಕ್ತದ ಮಾದರಿ ಸಂಗ್ರಹಿಸಿ ಹೋಗಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳು ಯಾರಾದರೂ ದಾಖಲಾಗಿದ್ದಾರೆಯೇ ? ಎನ್ನುವ ಬಗ್ಗೆಯೂ ತನಿಖೆ ನಡೆಸಿದ್ದರು.

ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ನ್ಯಾಯಾಲಯದ ಆವರಣದಲ್ಲಿ ಪತ್ತೆಯಾದ ರಕ್ತ ನಾಯಿಯದ್ದು ಎಂದು ದೃಢಪಟ್ಟಿದೆ. ವರದಿಯ ಪ್ರತಿಯನ್ನು ಪೊಲೀಸ್ ಆಯುಕ್ತರಿಗೆ ನೀಡಿದ್ದು, ರಕ್ತದ ಬಗ್ಗೆ ಇದ್ದ ಕುತೂಹಲ, ನಿಗೂಢತೆ, ಸಂಶಯಗಳಿಗೆ ಈ ಮೂಲಕ ಉತ್ತರ ಸಿಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News