ಡೆಂಗ್ ಜ್ವರ: ಮುಂಜಾಗ್ರತಾ ಕ್ರಮಕ್ಕೆ ಶಾಸಕ ಕಾಮತ್ ಸೂಚನೆ

Update: 2019-07-17 15:42 GMT

ಮಂಗಳೂರು, ಜು.17: ನಗದರಲ್ಲಿ ಡೆಂಗ್ ಜ್ವರ ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಆಯುಕ್ತರಿಗೆ ಸೂಚಿಸಿರುವುದಾಗಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದ್ದಾರೆ.

ಪಾಲಿಕೆಯ ಆಯುಕ್ತರು ಆರೋಗ್ಯ ವಿಭಾಗ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬಹುದು. ಆದರೆ ನಾಗರಿಕರು ಮತ್ತು ಮಕ್ಕಳು ಸುತ್ತಮುತ್ತ ಸ್ವಚ್ಛತೆ ಇಲ್ಲದಂತಹ ಪ್ರದೇಶಗಳಲ್ಲಿ, ಕೊಳಚೆ ನೀರು ಹರಿಯುವ ಪ್ರದೇಶಗಳಲ್ಲಿ ಮತ್ತು ಸೊಳ್ಳೆ ಉತ್ಪತ್ತಿಯಾಗುವ ಕಡೆ ಸಂಚರಿಸದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕರು ಮನವಿ ಮಾಡಿದರು.

ಜ್ವರದ ಲಕ್ಷಣ ಕಂಡುಬಂದಲ್ಲಿ ತಡಮಾಡದೆ ವೈದ್ಯರ ಬಳಿ ಪರೀಕ್ಷೆಗೆ ಒಳಪಡಬೇಕು. ನಾನು ಈಗಾಗಲೇ ಡೆಂಗ್‌ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿ ಪರಿಶೀಲನೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳೊಡನೆ ಸಮಾಲೋಚನೆ ನಡೆಸಿದ್ದೇನೆ. ಯೋಗ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಶಾಸಕರು ತಿಳಿಸಿದರು.

ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಅವರನ್ನು ಸಾರ್ವಜನಿಕ ಸೇವೆಗೆ ಬಳಸಿಕೊಳ್ಳಲಾಗುವುದು. ಹಾಗೆಯೇ ವೈದ್ಯರು ಸ್ವಯಂಪ್ರೇರಿತವಾಗಿ ಮುಂದೆ ಬಂದು ಈ ರೋಗ ಹರಡದಂತೆ ನಮ್ಮಾಂದಿಗೆ ಕೈಜೋಡಿಸಬೇಕು. ಫಾಂಗಿಂಗ್ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಸೂಚನೆ ನೀಡಿದ್ದೇನೆ. ಮನೆಗಳ ಒಳಗೆ ಕೂಡ ಅಗತ್ಯಬಿದ್ದರೆ ಫಾಂಗಿಂಗ್ ಮಾಡಲಾಗುವುದು. ಜನರು ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News