ಇಂಗ್ಲೀಷ್ ಮತ್ತು ಇತಿಹಾಸ ಕೋರ್ಸ್‌ಗಳಲ್ಲಿ ಆರೆಸ್ಸೆಸ್ ವಿರೋಧಿ ವಿಷಯದ ವಿರುದ್ಧ ಎಬಿವಿಪಿ ಪ್ರತಿಭಟನೆ

Update: 2019-07-17 15:49 GMT

ಹೊಸದಿಲ್ಲಿ,ಜು.17: ದಿಲ್ಲಿ ವಿವಿಯ ಪದವಿ ತರಗತಿಗಳ ಪಠ್ಯಕ್ರಮಗಳಲ್ಲಿ ಆರೆಸ್ಸೆಸ್ ವಿರೋಧಿ ವಿಷಯಗಳಿವೆ ಎಂದು ಎಬಿವಿಪಿ ಮತ್ತು ವಿವಿಯ ಶೈಕ್ಷಣಿಕ ಮಂಡಳಿಯ ಸದಸ್ಯರೋರ್ವರು ಆರೋಪಿಸಿದ್ದಾರೆ.

ಮಂಗಳವಾರ ದಿಲ್ಲಿ ವಿವಿಯಲ್ಲಿ ಪದವಿ ತರಗತಿಗಳ ಪಠ್ಯಕ್ರಮಗಳ ಕುರಿತು ಶೈಕ್ಷಣಿಕ ಮಂಡಳಿಯ ಸಭೆಯನ್ನು ಏರ್ಪಡಿಸಲಾಗಿತ್ತು. ಇಂಗ್ಲಿಷ್ ಪಠ್ಯಕ್ರಮದಲ್ಲಿಯ ಕಥೆಯೊಂದು ಆರೆಸ್ಸೆಸ್ ಮತ್ತು ಅದರ ಸಿದ್ಧಾಂತವನ್ನು ಕಳಪೆಯಾಗಿ ಬಿಂಬಿಸಿದೆ ಎಂದು ಮಂಡಳಿಯ ಸದಸ್ಯ ಹಾಗೂ ಸಂಘ ಪರಿವಾರ ಬೆಂಬಲಿತ ನ್ಯಾಷನಲ್ ಡೆಮಾಕ್ರಟಿಕ್ ಟೀಚರ್ಸ್ ಫ್ರಂಟ್ (ಎನ್‌ಡಿಟಿಎಫ್)ನ ಸದಸ್ಯ ಪ್ರೊ.ರಸಾಲ ಸಿಂಗ್ ಅವರು ಸಭೆಯಲ್ಲಿ ಆರೋಪಿಸಿದರು.

ಗುಜರಾತ್ ದಂಗೆಗಳನ್ನು ಆಧರಿಸಿರುವ ‘ಮಣಿಬೆನ್ ಅಲಿಯಾಸ್ ಬೀಬಿಜಾನ್’ ಕಥೆಯಲ್ಲಿ ಬಜರಂಗ ದಳ ಮತ್ತು ಆರೆಸ್ಸೆಸ್‌ನಿಂದ ಪಾತ್ರಗಳನ್ನು ‘ಕೆಟ್ಟದಾಗಿ’ ಮತ್ತು ‘ಕೊಲೆಗಾರರನ್ನಾಗಿ’ ತೋರಿಸಲಾಗಿದೆ ಎಂದು ಹೇಳಿದ ಸಿಂಗ್, ಮುಝಫ್ಫರ್‌ನಗರ ದಂಗೆಗಳು ಮತ್ತು ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದನ್ನು ಆಕ್ಷೇಪಿಸಿದರು. ಕೆಲವು ಭಾರತೀಯ ದೇವತೆಗಳನ್ನು ಎಲ್‌ಜಿಬಿಟಿ ಸಮುದಾಯದ ಸದಸ್ಯರನ್ನಾಗಿ ಪಠ್ಯಕ್ರಮದಲ್ಲಿ ಬಿಂಬಿಸಲಾಗಿದೆ ಎಂದೂ ಅವರು ಆರೋಪಿಸಿದರು.

  ರಾಜಕೀಯ ವಿಜ್ಞಾನ ಪಠ್ಯಕ್ರಮದಲ್ಲಿ ಸಾಮಾಜಿಕ ಚಳವಳಿಗಳ ಕೋರ್ಸ್‌ನಡಿ ಮಾವೋವಾದದ ಅಧ್ಯಯನವನ್ನು ಸೇರಿಸುವ ಪ್ರಸ್ತಾಪವೂ ಇತ್ತು ಎಂದರು. ಇತಿಹಾಸದ ಪಠ್ಯಕ್ರಮದಲ್ಲಿ ನಕ್ಸಲಿಸಂ ಮತ್ತು ಕಮ್ಯುನಿಸಂ ಬೋಧಿಸುವ ಪ್ರಸ್ತಾಪವನ್ನು ಎನ್‌ಡಿಟಿಎಫ್ ವಿರೋಧಿಸಿದೆ.

ಶೈಕ್ಷಣಿಕ ಮಂಡಳಿಯ ಸಭೆ ನಡೆಯುತ್ತಿದ್ದಂತೆ ಪದವಿ ಪಠ್ಯಕ್ರಮದಲ್ಲಿ ‘ಆಕ್ಷೇಪಾರ್ಹ ಮತ್ತು ಏಕಪಕ್ಷೀಯ ವಿಷಯಗಳ’ ಸೇರ್ಪಡೆಯ ವಿರುದ್ಧ ಎಬಿವಿಪಿ ಕಾರ್ಯಕರ್ತರು ಕುಲಪತಿಗಳ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು.

ಈ ಪ್ರತಿಭಟನೆಗಳ ಬಳಿಕ ಶೈಕ್ಷಣಿಕ ಮಂಡಳಿಯು ವಿವಿಧ ಕೋರ್ಸ್‌ಗಳ ಪಠ್ಯಕ್ರಮಗಳನ್ನು ಅಂಗೀಕರಿಸಿತಾದರೂ ಅವುಗಳನ್ನು ಪರಿಷ್ಕರಣೆಗಾಗಿ ಸಂಬಂಧಿತ ವಿಭಾಗಗಳಿಗೆ ರವಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News